×
Ad

ಭಾರತೀಯ ಕ್ಷಿಪಣಿಯಿಂದಾಗಿ ನಮ್ಮದೇ ವಾಯುಪಡೆಯ ಹೆಲಿಕಾಪ್ಟರ್ ಪತನವಾಯಿತೇ ?

Update: 2019-03-29 12:54 IST

ಹೊಸದಿಲ್ಲಿ : ಶ್ರೀನಗರ ಸಮೀಪದ ಬುಡ್ಗಾಮ್ ಎಂಬಲ್ಲಿ ಫೆಬ್ರವರಿ 27ರಂದು ಆರು ಮಂದಿ ವಾಯು ಪಡೆಯ ಸಿಬ್ಬಂದಿ ಹಾಗೂ ಒಬ್ಬ ನಾಗರಿಕನ ಬಲಿ ಪಡೆದ ಭಾರತದ ಮಿ 17 ವಿ5 ಹೆಲಿಕಾಪ್ಟರ್ ಪತನಗೊಳ್ಳುವ ಕೆಲವೇ ಕ್ಷಣಗಳ ಮೊದಲು ಭಾರತೀಯ ವಾಯುಪಡೆ ಕ್ಷಿಪಣಿಯೊಂದನ್ನು ಪ್ರಯೋಗಿಸಿತ್ತು ಎಂದು ತನಿಖಾಕಾರರು ಕಂಡುಕೊಂಡಿದ್ದಾರೆ. ಈ ಹೆಲಿಕಾಪ್ಟರ್ ಪತನಗೊಳ್ಳುವುದಕ್ಕಿಂತ ಮುಂಚಿನ ಬೆಳವಣಿಗೆಗಳನ್ನು ತನಿಖಾಕಾರರು ಗಂಭೀರವಾಗಿ ಪರಿಶೀಲಿಸುತ್ತಿದ್ದಾರೆ.

ಕೊನೆಯ ಕ್ಷಣಗಳಲ್ಲಿ ಏನಾಯಿತು, ಐಎಫ್‍ಎಫ್ ( ಐಡೆಂಟಿಫೈ, ಫ್ರೆಂಡ್ ಆರ್ ಫೋ) ವ್ಯವಸ್ಥೆಯನ್ನು ಸ್ವಿಚ್ ಆನ್ ಮಾಡಲಾಗಿತ್ತೇ ಅಥವಾ ಇಲ್ಲವೇ ಎಂದು ತಿಳಿಯುವ ಪ್ರಯತ್ನಗಳೂ ನಡೆಯುತ್ತಿವೆ.

ಈ ಹೆಲಿಕಾಪ್ಟರ್ ಪತನಕ್ಕೆ ಯಾರೇ ಕಾರಣರಾಗಿದ್ದರೂ ಅವರ ವಿರುದ್ಧ ಕೋರ್ಟ್ ಮಾರ್ಷಲ್ ಪ್ರಕ್ರಿಯೆಗೆ ವಾಯು ಸೇನೆ  ಹಿಂಜರಿಯುವುದಿಲ್ಲ ಎಂದು ಉನ್ನತಾಧಿಕಾರಿಗಳು ತಿಳಿಸಿದ್ದಾರೆ.

ಪಾಕಿಸ್ತಾನದ ಸುಮಾರು 25 ಯುದ್ಧ ವಿಮಾನಗಳು ಫೆಬ್ರವರಿ 27ರ ಬೆಳಗ್ಗಿನ ಜಾವ ಗಡಿ ಸಮೀಪ ಕಾಣಿಸಿಕೊಂಡ ನಂತರ ಅಲರ್ಟ್ ಘೋಷಿಸಲಾಗಿದ್ದ ಸಂದರ್ಭ ಈ ಕ್ಷಿಪಣಿಯನ್ನು ಪ್ರಯೋಗಿಸಲಾಗಿತ್ತೆಂದು ಮೂಲಗಳು ತಿಳಿಸಿವೆ. ಪಾಕ್ ಯುದ್ಧ ವಿಮಾನಗಳು ಗಡಿ ದಾಟಿ ಭಾರತೀಯ ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸುವ ಸಂಭಾವ್ಯತೆಯಿದೆಯೆಂದು ತಿಳಿಯಲಾದ ಹಿನ್ನೆಲೆಯಲ್ಲಿ ಅಲರ್ಟ್ ಘೋಷಿಸಲಾಗಿತ್ತಲ್ಲದೆ  ಪಾಕಿಸ್ತಾನ ತನ್ನ ಬಳಿಯಿರುವ ಶಸ್ತ್ರಸಜ್ಜಿತ ಯುಎವಿಗಳನ್ನೂ ನಿಯೋಜಿಸಿರಬಹುದು ಎಂಬ ಶಂಕೆಯಿತ್ತು.

ಆ ಸಂದರ್ಭ ನಿಧಾನವಾಗಿ ಚಲಿಸುತ್ತಿದ್ದ ಮಿ 17 ವಿ5 ಹೆಲಿಕಾಪ್ಟರ್ ಅನ್ನು ಕೆಳಗಿನ ಮಟ್ಟದಲ್ಲಿ ಹಾರುತ್ತಿರುವ ಪಾಕ್ ಯುಎವಿ ಎಂದು ತಪ್ಪಾಗಿ ತಿಳಿದಿರುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ಹೆಲಿಕಾಪ್ಟರ್ ಪತನ ಘಟನೆಯನ್ನು ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ ಹಾಗೂ ತನಿಖೆ ನಡೆಸುತ್ತಿರುವ ಹಿರಿಯ ಅಧಿಕಾರಿಗಲಿಗೆ ಲಭ್ಯ ಎಲ್ಲಾ ಮಾಹಿತಿ ಹಾಗೂ ದಾಖಲೆಗಳನ್ನು ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಆ ದಿನ ನೌಶೇರಾ ಸೆಕ್ಟರಿನಲ್ಲಿರುವ ಗಡಿ ನಿಯಂತ್ರಣಾ ರೇಖೆಯ ಸಮೀಪ ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳು ಪಾಕ್ ಯುದ್ಧ ವಿಮಾನಗಳ ಜತೆ ಹಣಾಹಣಿ ನಡೆಸಿದ ಹತ್ತು ನಿಮಿಷದಲ್ಲಿ ಹೆಲಿಕಾಪ್ಟರ್ ಪತನಗೊಂಡಿತ್ತು.

ಭಾರತೀಯ ವಾಯು ಸೇನೆ ಹೆಲಿಕಾಪ್ಟರ್ ಪತನವಾಗಿರುವುದನ್ನು ಒಪ್ಪಿಕೊಂಡಿದ್ದರೂ ಆ ಸಂದರ್ಭ ಎರಡೂ ಕಡೆಗಳ ಯುದ್ಧ ವಿಮಾನಗಳ ನಡುವೆ ಹಣಾಹಣಿ ನಡೆಯುತ್ತಿತ್ತೆಂಬುದನ್ನು ಉಲ್ಲೇಖಿಸಿರಲಿಲ್ಲ. ಅತ್ತ ಪಾಕ್ ಮಿಲಿಟರಿ ನೌಷೇರಾ ಸೆಕ್ಟರ್ ಸಮೀಪ ನಡೆದ ಈ ವಾಯು ಸಂಘರ್ಷದ ಬಗ್ಗೆ ಉಲ್ಲೇಖಿಸಿದೆಯಾದರೂ ಹೆಲಿಕಾಪ್ಟರ್ ಪತನದಲ್ಲಿ ತನ್ನ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News