ಪೊಲೀಸರನ್ನು ಗುಂಡು ಪಾರ್ಟಿಗೆ ಕರೆದೊಯ್ದು ಪರಾರಿಯಾದ ಗ್ಯಾಂಗ್‍ಸ್ಟರ್!

Update: 2019-03-29 10:41 GMT

ಮೀರತ್ : ವಕೀಲರೊಬ್ಬರನ್ನು 1996ರಲ್ಲಿ ಹತ್ಯೆಗೈದಿದ್ದಕ್ಕಾಗಿ ಜೀವಾವಧಿ ಶಿಕ್ಷೆ ಎದುರಿಸುತ್ತಿರುವ 50 ವರ್ಷದ ಬಡ್ಡನ್ ಸಿಂಗ್ ಅಲಿಯಾಸ್ ಬಡ್ಡೊ ಎಂಬ  ಕೈದಿಯನ್ನು ಗುರುವಾರ ಪೊಲೀಸ್ ಬೆಂಗಾವಲಿನಲ್ಲಿ ಗಾಝಿಯಾಬಾದ್ ನ್ಯಾಯಾಲಯಕ್ಕೆ ಕೊಂಡು ಹೋಗುತ್ತಿರುವ ಸಂದರ್ಭ ಆತ ಪೊಲೀಸರನ್ನು ಮೀರತ್ ನ ದಿಲ್ಲಿ ರಸ್ತೆಯ ಹೋಟೆಲ್ ನಲ್ಲಿ ತನ್ನ ಸಹಚರರು ಆಯೋಜಿಸಿದ್ದ ಗುಂಡು ಪಾರ್ಟಿಗೆ ಕರೆದೊಯ್ದು ನಂತರ ಪರಾರಿಯಾಗಿದ್ದಾನೆ.

ಘಟನೆ ಸಂಬಂಧ ಒಬ್ಬ ಇನ್‍ಸ್ಪೆಕ್ಟರ್ ಸಹಿತ ಏಳು ಮಂದಿ ಪೊಲೀಸ್ ಸಿಬ್ಬಂದಿಯನ್ನು ವಶಪಡಿಸಿಕೊಳ್ಳಲಾಗಿದ್ದು ಅವರ ನಶೆ ಇನ್ನೂ ಇಳಿದಿಲ್ಲ ಎಂದು ಮೀರತ್ ನಗರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ನಿತಿನ್ ತಿವಾರಿ ತಿಳಿಸಿದ್ದಾರೆ.

ಫತೇಘರ್ ಕಾರಾಗೃಹದಲ್ಲಿದ್ದ ಬಡ್ಡೊನನ್ನು ಪ್ರಕರಣವೊಂದರ ವಿಚಾರಣೆಗಾಗಿ ಗಝಿಯಾಬಾದ್ ನ್ಯಾಯಾಲಯಕ್ಕೆ ಕರೆದೊಯ್ಯಲಾಗುತ್ತಿದ್ದಾಗ ಈ ಘಟನೆ ನಡೆದಿದ್ದು ಆತನನ್ನು ಶೀಘ್ರ ಬಂಧಿಸುವ ವಿಶ್ವಾಸವನ್ನು ತಿವಾರಿ ವ್ಯಕ್ತಪಡಿಸಿದ್ದಾರೆ.

ಕ್ರೈಂ ಬ್ರ್ಯಾಂಚ್ ಅಧಿಕಾರಿ ಸಂಜಯ್ ಮಿಶ್ರಾ ಅವರು ಘಟನೆಯ ವರದಿ ಸಲ್ಲಿಸಿದ ನಂತರ  ತಪ್ಪಿತಸ್ಥರ  ವಿರುದ್ಧ  ಸೂಕ್ತ ಕ್ರಮ ಕೈಗೊಳ್ಳಬಹುದು ಎಂದು ಫರುಕ್ಕಾಬಾದ್ ಹಿರಿಯ ಎಸ್ಪಿ ಅನಿಲ್ ಕುಮಾರ್ ಮಿಶ್ರಾ ಹೇಳಿದ್ದಾರೆ.

ಬಡ್ಡೋನನ್ನು ಕಳೆದ ವರ್ಷ ಮೀರತ್ ಪೊಲೀಸರು ಬಂಧಿಸಿದ್ದರು. ಆರಂಭದಲ್ಲಿ ಒಂದು ತಿಂಗಳು ಆತನನ್ನು ಮೀರತ್ ಜೈಲಿನಲ್ಲಿರಿಸಲಾಗಿದ್ದರೆ ನಂತರ ಆತನದ್ದೇ ಸಹಚರರಿಂದ ಆತನ ಜೀವಕ್ಕೆ ಬೆದರಿಕೆಯಿದೆಯೆಂದು ಅರಿತ ಪೊಲೀಸರು ಆತನನ್ನು ಫತೇಘರ್ ಜೈಲಿಗೆ ಸ್ಥಳಾಂತರಿಸಿದ್ದರು.

ಆಸ್ಟ್ರೇಲಿಯಾದಲ್ಲಿ ಎಂಬಿಎ ಶಿಕ್ಷಣ ಪಡೆಯುತ್ತಿರುವ ತನ್ನ ಪುತ್ರ ಸಿಕಂದರ್ ಮೀರತ್ ನಗರಕ್ಕೆ ಬಂದಿರುವುದರಿಂದ ಆತನನ್ನು ಭೇಟಿಯಾಗಲೆಂದು ಕಳೆದ ತಿಂಗಳು ಆತ ಸುಪ್ರೀಂ ಕೋರ್ಟಿನ ಮುಂದೆ ಪೆರೋಲ್ ಗೆ ಅಪೀಲು ಸಲ್ಲಿಸಿದ್ದು ಅದು ಇನ್ನೂ ಬಾಕಿಯಿದೆ ಎಂದು ತಿಳಿದು ಬಂದಿದೆ.

ಗ್ರಾಮ ಪಂಚಾಯತ್ ಚುನಾವಣೆಗೆ ಸಂಬಂಧಿಸಿದ ದ್ವೇಷದಲ್ಲಿ ಬಡ್ಡೊ 1996ರಲ್ಲಿ ಮೀರತ್  ಕಲೆಕ್ಟರೇಟ್ ಕಚೇರಿ ಸಮೀಪ ವಕೀಲ ರವೀಂದ್ರ ಗುರ್ಜರ್ ಎಂಬವರನ್ನು ಕೊಲೆಗೈದ ಆರೋಪದ ಮೇಲೆ ಬಂಧಿತನಾಗಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News