ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬ್ಯಾಡ್ಮಿಂಟನ್ ಸ್ಪರ್ಧೆಗಳು ಕಠಿಣವಾಗಿರಲಿವೆ: ಸೆನಾ
ಹೊಸದಿಲ್ಲಿ, ಮಾ.31: ಮುಂಬರುವ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬ್ಯಾಡ್ಮಿಂಟನ್ ಸ್ಪರ್ಧೆಗಳು ಈ ಹಿಂದಿನ ಗೇಮ್‌ಗಳಿಗಿಂತ ಕಠಿಣವಾಗಿರಲಿವೆ ಎಂದು ದೇಶದ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅಭಿಪ್ರಾಯಪಟ್ಟಿದ್ದಾರೆ.
ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ‘‘ಚೀನಾದ ಶಟ್ಲರ್‌ಗಳು ತುಂಬಾ ಚೆನ್ನಾಗಿ ಆಡುತ್ತಿದ್ದಾರೆ. ಅವರಿಗಿಂತ ಹೆಚ್ಚಾಗಿ ಇತರ ಮಹಿಳಾ ಸ್ಪರ್ಧಿಗಳೂ ನಿಜವಾಗಿಯೂ ಉತ್ತಮವಾಗಿ ಆಡುತ್ತಿದ್ದಾರೆ. ಹೀಗಾಗಿ ಈ ಬಾರಿ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬ್ಯಾಡ್ಮಿಂಟನ್ ಸ್ಪರ್ಧೆಗಳು ಭಾರೀ ಕಠಿಣವಾಗಿರಲಿವೆ’’ ಎಂದಿದ್ದಾರೆ.
‘‘ಆದರೆ ಸದ್ಯ ನಾನು ಒಲಿಂಪಿಕ್ ಗೇಮ್ಸ್ ಗಳು ಹಾಗೂ ಅವುಗಳಿಗೆ ಅರ್ಹತೆ ಗಳಿಸುವ ಬಗ್ಗೆ ಚಿಂತಿಸುತ್ತಿಲ್ಲ. ಸದ್ಯದ ಟೂರ್ನಿಗಳಲ್ಲಿ ನನ್ನ ಪ್ರದರ್ಶನವನ್ನು ಸುಧಾರಿಸುವ ನ ಫಿಟ್ ಹಾಗೂ ಗಾಯದಿಂದ ಮುಕ್ತವಾಗಲು ಯೋಚಿಸುತ್ತಿದ್ದೇನೆ’’ ಎಂದು ಸೈನಾ ಹೇಳಿದ್ದಾರೆ.
ಟೋಕಿಯೊ ಒಲಿಂಪಿಕ್‌ಗೆ ಸಜ್ಜಾಗಲು ಸೈನಾ ಫಿಟ್ನೆಸ್ ಕಾಯ್ದುಕೊಳ್ಳಲು ಬೆವರು ಸುರಿಸುತ್ತಿದ್ದಾರೆ. ದೀರ್ಘಕಾಲದವರೆಗೆ ಅವರು ಗಾಯದಿಂದ ಬಳಲುತ್ತಿದ್ದಾರೆ. 2016ರಲ್ಲಿ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ತನ್ನ ಅತ್ಯುತ್ತಮ ಫಾರ್ಮ್‌ಗೆ ಮರಳಲು ಸೈನಾ ಹರಸಾಹಸ ಪಡುತ್ತಿದ್ದಾರೆ. 2015ರಲ್ಲಿ ಅವರು ಕೆಲವು ವಾರಗಳ ಕಾಲ ವಿಶ್ವದ ನಂ.1 ಬ್ಯಾಡ್ಮಿಂಟನ್ ಪಟುವಾಗಿದ್ದರು.
ಟೋಕಿಯೊ ಒಲಿಂಪಿಕ್ಸ್‌ಗೆ ಭಾರತದಿಂದ ಮಹಿಳಾ ಸಿಂಗಲ್ಸ್‌ನಲ್ಲಿ ಇಬ್ಬರು ಆಟಗಾರ್ತಿಯರನ್ನು ಕಳುಹಿಸಲು ಅವಕಾಶವಿದೆ. 2020ರ ಎ.30ರಂದು ಮುಗಿಯುವ ಅರ್ಹತಾ ಅವಧಿಯ ಬಳಿಕ ಪ್ರಕಟವಾಗುವ ವಿಶ್ವ ರ್ಯಾಂಕಿಂಗ್ ಪ್ರಕಾರ ಈ ಇಬ್ಬರು ಆಟಗಾರ್ತಿಯರು ಅಗ್ರ 16ರಲ್ಲಿ ಸ್ಥಾನ ಪಡೆದಿರಬೇಕಾಗುತ್ತದೆ. ಸೈನಾಗೆ ಇದು ಒಟ್ಟು ನಾಲ್ಕನೇ ಒಲಿಂಪಿಕ್ ಆಗಿದೆ.