ಆತಂಕಕಾರಿ ಶಿಶಿಲ-ಭೈರಾಪುರ ರಸ್ತೆ ಯೋಜನೆ

Update: 2019-04-09 18:17 GMT

ಮಾನ್ಯರೇ,

ಚಿಕ್ಕಮಗಳೂರು ಜಿಲ್ಲೆಯ ಭೈರಾಪುರವನ್ನು ದಕ್ಷಿಣ ಕನ್ನಡ ಜಿಲ್ಲೆಯ ಶಿಶಿಲದೊಡನೆ ಸಂಪರ್ಕಿಸುವ ಹೆದ್ದಾರಿಯೊಂದರ ರಚನೆಯ ಬಗ್ಗೆ ಆರಂಭಿಕ ಸರ್ವೇ ಕಾರ್ಯ ನಡೆದಿದೆ. ಬಹುಸೂಕ್ಷ್ಮಪರಿಸರ ಪ್ರದೇಶದಲ್ಲಿ ಹಾದು ಹೋಗುವ ಈ ರಸ್ತೆ ಅನೇಕ ಆತಂಕಗಳನ್ನು ಸೃಷ್ಟಿಸಿದೆ.

ಸುಸ್ಥಿರ ಅಭಿವೃದ್ಧಿಗಾಗಿ ಒಂದು ಭೂಪ್ರದೇಶವು ಶೇಕಡಾ 33ರಷ್ಟು ಅರಣ್ಯ ಪ್ರದೇಶವನ್ನು ಹೊಂದಿರಬೇಕು. ಇಲ್ಲದಿದ್ದರೆ ಕೊಡಗಿನಲ್ಲಿ ನಡೆದಂತಹ ಪ್ರಾಕೃತಿಕ ದುರಂತ ಇತರ ಪ್ರದೇಶಗಳಲ್ಲೂ ಸಂಭವಿಸುತ್ತದೆ. ಕರ್ನಾಟಕದಲ್ಲಿರುವುದು ಶೇ.9ರಷ್ಟು ಅರಣ್ಯ ಮಾತ್ರ. ಇದರಿಂದಾಗಿ ಇಡೀ ಕರ್ನಾಟಕದಲ್ಲಿ ಬರ ಉಂಟಾಗಿದೆ. ಇಂತಹ ಸಂದರ್ಭದಲ್ಲಿ ಎರಡು ಲಕ್ಷ ಮರಗಳು ಕಣ್ಮರೆಯಾಗುವ ಮತ್ತು ನೇತ್ರಾವತಿ, ಮೃತ್ಯುಂಜಯ ಮತ್ತು ಕಪಿಲಾ ನದಿಗಳ ಮೇಲೆ ಪರಿಣಾಮ ಬೀರುವ ಶಿಶಿಲ-ಭೈರಾಪುರ ಯೋಜನೆಯ ಅನುಷ್ಠಾನದ ಸಂಚು ನಡೆದಿದೆ.

ಈ ಯೋಜನೆಯ ನೇರ ಪರಿಣಾಮವೆಂದರೆ ಕಪಿಲಾ ನದಿ ಸಂಪೂರ್ಣ ಬತ್ತಿ ಹೋಗಿ ಅಪೂರ್ವ ಮೆಹಶೀರ್ ಮತ್ಸ್ಯ ಸಂತತಿ ಸರ್ವನಾಶವಾಗುವುದು. ಈಗಾಗಲೇ ಎತ್ತಿನ ಹೊಳೆ ಯೋಜನೆಯಿಂದಾಗಿ ನೇತ್ರಾವತಿ ಬತ್ತುತ್ತಿದೆ. ಕಪಿಲಾ ನದಿಯೂ ಬತ್ತಿ ಹೋದರೆ ಮಂಗಳೂರಿಗೆ ನೀರೇ ಇಲ್ಲದಂತಾಗುತ್ತದೆ. ಶಿಶಿಲ-ಭೈರಾಪುರ ರಸ್ತೆ ಆರ್ಥಿಕವಾಗಿಯೂ ಲಾಭದಾಯಕವೇನಲ್ಲ. ಅದರ ಬದಲು ಚಾರ್ಮಾಡಿ ರಸ್ತೆಯನ್ನು ವೈಜ್ಞಾನಿಕವಾಗಿ ಅಗಲೀಕರಿಸಿದರೆ ದ.ಕ. ಮತ್ತು ಚಿಕ್ಕಮಗಳೂರು ಎರಡೂ ಉಳಕೊಳ್ಳುತ್ತವೆ. ಗಾಡ್ಗೀಳ್ ವರದಿಯನ್ನು ಕಡೆಗಣಿಸಿ ಈ ವಿನಾಶಕಾರಿ ಯೋಜನೆ ಅನುಷ್ಠಾನಕ್ಕೆ ಬಾರದಂತೆ ನೋಡಿಕೊಳ್ಳಬೇಕಾದದ್ದು ನಮ್ಮೆಲ್ಲರ ಹೊಣೆಯಾಗಿದೆ.

Writer - -ಪ್ರಭಾಕರ, ಶಿಶಿಲ

contributor

Editor - -ಪ್ರಭಾಕರ, ಶಿಶಿಲ

contributor

Similar News