×
Ad

ಚುನಾವಣಾ ಬಾಂಡ್: 2 ವರ್ಷಗಳಲ್ಲಿ ಬಿಜೆಪಿ ಗಳಿಕೆ ಎಷ್ಟು ಕೋಟಿ ರೂ. ಗೊತ್ತಾ?

Update: 2019-04-12 11:16 IST

ಹೊಸದಿಲ್ಲಿ, ಎ. 12: ಕಳೆದ ಎರಡು ವರ್ಷಗಳಲ್ಲಿ ಬಿಜೆಪಿ ಕ್ರಮವಾಗಿ 997 ಕೋಟಿ ರೂ. ಹಾಗೂ 990 ಕೋಟಿ ರೂ. ದೇಣಿಗೆಯಾಗಿ ಸ್ವೀಕರಿಸಿದ್ದು, ಇದು ಕಾಂಗ್ರೆಸ್ ಪಕ್ಷ ಇದೇ ಅವಧಿಯಲ್ಲಿ ಪಡೆದ ದೇಣಿಗೆಯ ಐದು ಪಟ್ಟು ಅಧಿಕ ಎಂದು ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಚುನಾವಣಾ ಆಯೋಗದ ಪರವಾಗಿ ಹಾಜರಾದ ಹಿರಿಯ ವಕೀಯ ರಾಕೇಶ್ ದ್ವಿವೇದಿ, ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್, ನ್ಯಾಯಮೂರ್ತಿಗಳಾದ ದೀಪಕ್ ಗುಪ್ತಾ ಮತ್ತ ಸಜೀವ್ ಖನ್ನಾ ಅವರನ್ನೊಳಗೊಂಡ ನ್ಯಾಯಪೀಠಕ್ಕೆ ಈ ಮಾಹಿತಿ ನೀಡಿದರು. ಚುನಾವಣಾ ಬಾಂಡ್ ಮೂಲಕ ಅನಾಮಧೇಯ ಹೆಸರಿನಲ್ಲಿ ಸ್ವೀಕರಿಸುವ ಬಾಂಡ್ ವಿಚಾರದಲ್ಲಿ ಹೆಚ್ಚು ಪಾರದರ್ಶಕತೆ ತರುವಂತೆ ಸೂಚಿಸಬೇಕು ಎಂದು ಕೋರಿ ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಈ ಮಾಹಿತಿ ನೀಡಿದರು. ಪ್ರಸ್ತುತ ಇರುವ ವ್ಯವಸ್ಥೆಯು ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುವಂಥದ್ದು ಮತ್ತು ಕಪ್ಪು ಹಣ ಹುಟ್ಟುಹಾಕುವಂಥದ್ದು ಎಂದು ಎಡಿಆರ್ ಆಪಾದಿಸಿದೆ.

ಅರ್ಜಿದಾರರ ಪರವಾಗಿ ವಾದಿಸಿದ ಪ್ರಶಾಂತ್ ಭೂಷಣ್, ಅನಾಮಧೇಯ ದೇಣಿಗೆಯ ಪೈಕಿ ಶೇಕಡ 95ರಷ್ಟು ಆಡಳಿತಾರೂಢ ಬಿಜೆಪಿಗೆ ಬಂದಿದೆ ಎಂದು ದೂರಿದರು. 2017-18ರಲ್ಲಿ ಬಿಜೆಪಿಗೆ 222 ಕೋಟಿ ರೂ. ಮೌಲ್ಯದ 520 ಬಾಂಡ್‌ಗಳು ಬಂದಿವೆ ಎಂದು ಮಾಹಿತಿ ನೀಡಲಾಯಿತು. ಬಿಜೆಪಿ 200 ಕೋಟಿ ರೂ.ಗಳನ್ನು ಅನಾಮಧೇಯ ಚುನಾವಣಾ ಬಾಂಡ್ ಮೂಲಕ ಪಡೆದಿದ್ದು, ಉಳಿದ ಪಕ್ಷಗಳು ಕೇವಲ 11 ಕೋಟಿ ರೂಪಾಯಿಯನ್ನು ಮಾತ್ರ ಪಡೆದಿವೆ. ಆದ್ದರಿಂದ ಬಿಜೆಪಿ ಶೇಕಡ 94ರಷ್ಟು ಆದಾಯವನ್ನು ಇಂಥ ಬಾಂಡ್ ಮೂಲಕ ಪಡೆದಿರುವುದು ನಿಜ ಎಂದು ಚುನಾವಣಾ ಆಯೋಗದ ವಕೀಲ ದ್ವಿವೇದಿ ಮಾಹಿತಿ ನೀಡಿದರು.

ಬಿಜೆಪಿ 2016-17ರಲ್ಲಿ 997 ಕೋಟಿ ರೂ. ದೇಣಿಗೆ ಸ್ವೀಕರಿಸಿದ್ದು, ಚುನಾವಣಾ ಆಯೋಗದ ಬಳಿ 529 ಕೋಟಿಯನ್ನು ಘೋಷಿಸಿಕೊಂಡಿದೆ. 468 ಕೋಟಿ ರೂ. ನಗದು ದೇಣಿಗೆ ಸ್ವೀಕರಿಸಿದ್ದು, ಇವೆಲ್ಲ 20 ಸಾವಿರಕ್ಕಿಂತ ಕಡಿಮೆ ಮೌಲ್ಯದ್ದು ಎಂದು ಪಕ್ಷ ಹೇಳಿದ್ದಾಗಿ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಇದೇ ಅವಧಿಯಲ್ಲಿ ಕಾಂಗ್ರೆಸ್ ಪಕ್ಷ 180 ಕೋಟಿ ರೂ. ದೇಣಿಗೆ ಸಂಗ್ರಹಿಸಿದ್ದು, 138 ಕೋಟಿ ರೂ. ಅನಾಮಧೇಯರಿಂದ ಸಣ್ಣ ದೇಣಿಗೆಗಳ ಮೂಲಕ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News