ವಲಸೆ ಕಾರ್ಮಿಕರ ಗುರುತಿನ ಆಧಾರ ಮಾಲಕರ ಬಳಿ ಇರಲಿ

Update: 2019-04-12 18:15 GMT

ಮಾನ್ಯರೇ,

 ಉಡುಪಿ ಜಿಲ್ಲೆಯಲ್ಲಿ ಕಾರ್ಮಿಕರ ಕೊರತೆ ಎದುರಾದ ಕಾರಣದಿಂದ, ಇಲ್ಲಿಯ ಕಟ್ಟಡ ನಿರ್ಮಾಣ, ರಸ್ತೆ ನಿರ್ಮಾಣದ ಗುತ್ತಿಗೆದಾರರು, ಮತ್ಸೋದ್ಯಮಿಗಳು, ಇನ್ನಿತರ ಉದ್ಯಮಿಗಳು, ಕೃಷಿಕರು, ಉತ್ತರ ಕರ್ನಾಟಕ, ಉತ್ತರ ಭಾರತದ ಕಾರ್ಮಿಕರನ್ನು ಬಳಸಿಕೊಳ್ಳುತ್ತಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಕೂಲಿ ಕಾರ್ಮಿಕರಿಗೆ ಬಹುವಿಧ ಉದ್ಯೋಗದ ಅವಕಾಶಗಳು ಬಹಳಷ್ಟು ಇದ್ದ ಕಾರಣದಿಂದಾಗಿ ಕಾರ್ಮಿಕರು ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ವಲಸೆ ಬಂದು ಉಡುಪಿಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜೋಪಡಿ, ಬಾಡಿಗೆ ಮನೆಗಳಲ್ಲಿ ನೆಲೆಕಂಡಿದ್ದಾರೆ. ಇವರಿಗೆ ಬಾಡಿಗೆ ಮನೆ ನೀಡುವಾಗ ಮನೆ ಮಾಲಕರು ಹಾಗೂ ಕೆಲಸಕ್ಕೆ ಇಟ್ಟುಕೊಳ್ಳುವಾಗ ಉದ್ಯಮಿಗಳು ತಮ್ಮ ಬಳಿ, ಅವರ ಯಾವೊಂದು ವಿಳಾಸದ ದಾಖಲೆಯನ್ನು ಪಡೆದುಕೊಳ್ಳದೆ ಕಾರ್ಮಿಕರಿಗೆ ಬಾಡಿಗೆ ಮನೆ ನೀಡುವುದು, ಕೆಲಸಕ್ಕೆ ನೇಮಿಸಿಕೊಳ್ಳುವುದು ತಿಳಿದು ಬಂದಿದೆ.

ಆಕಸ್ಮಿಕವಾಗಿ ಕಾರ್ಮಿಕರು ಅಪಘಾತ, ಕುಡಿತ, ಆತ್ಮಹತ್ಯೆ, ಅನಾರೋಗ್ಯ, ಸಹಜ- ಅಸಹಜ ಕಾರಣಗಳಿಂದ ಮೃತಪಟ್ಟಾಗ, ಮೃತ ವ್ಯಕ್ತಿಯ ವಿಳಾಸ ಪತ್ತೆಯಾಗುವುದಿಲ್ಲ. ಮೃತರ ವಾರಸುದಾರರು ಪತ್ತೆ ಆಗುವವರೆಗೆ ಮೃತದೇಹವನ್ನು ಆಯಾಯ ಠಾಣಾ ವ್ಯಾಪ್ತಿಯ ಪೊಲೀಸರು ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆಗಳ ಶೀತಲೀಕೃತ ಶವಾಗಾರದಲ್ಲಿ ರಕ್ಷಿಸಿಡುತ್ತಾರೆ. ಮೃತನ ಸಂಬಂಧಿಕರನ್ನು ಪತ್ತೆಹಚ್ಚಲು, ಪೊಲೀಸ್ ಇಲಾಖೆಯು ಮೃತರ ಭಾವಚಿತ್ರ, ಚಹರೆ, ಲಭ್ಯ ವಿವರಗಳನ್ನು ನೀಡಿ, ಸಾಮಾಜಿಕ ಜಾಲತಾಣ, ಪತ್ರಿಕೆಗಳಲ್ಲಿ ಪ್ರಕಟನೆ ನೀಡುತ್ತದೆ. ಇಂತಹ ಪ್ರಕಟನೆಗಳ ಸಹಾಯದಿಂದ ಒಂದೆರಡು ಪ್ರಕರಣಗಳಲ್ಲಿ ಮೃತರ ವಾರಸುದಾರರು ಪತ್ತೆಯಾಗಬಹುದು. ಆದರೆ ಬಹುತೇಕ ಪ್ರಕರಣಗಳಲ್ಲಿ ಮೃತದೇಹದ ವಾರಸುದಾರರು ಪತ್ತೆಯಾಗುವುದಿಲ್ಲ. ಇಂತಹ ಮೃತದೇಹಗಳು ಕಾನೂನಿನ ಅಡಿಯಲ್ಲಿ ವಾರಸುದಾರರಿಲ್ಲದ, ‘ಅಪರಿಚಿತ ಶವ’ ಎಂದು ಪರಿಗಣಿಸಲ್ಪಡುತ್ತದೆ. ವಾರಸುದಾರರ ಕಾಯುವಿಕೆಯ ಸಮಯ ಮಿತಿ ಕಳೆದ ಬಳಿಕ, ಪೊಲೀಸರು ಕಾನೂನು ಪ್ರಕ್ರಿಯೆಗಳನ್ನು ನಡೆಸಿ, ಸಂಬಂಧ ಪಟ್ಟ ಸ್ಥಳೀಯಾಡಳಿತದ ನೆರವಿನೊಂದಿಗೆ ರುದ್ರಭೂಮಿಯಲ್ಲಿ ದಫನ ನಡೆಸುತ್ತಾರೆ.

ಮೃತ ವ್ಯಕ್ತಿ ನಿಜವಾಗಿಯೂ ಅನಾಥನಾಗಿರುವುದಿಲ್ಲ. ಆತನಿಗೆ ಹುಟ್ಟೂರಲ್ಲಿ ಕುಟುಂಬ ವರ್ಗ ಎಲ್ಲವೂ ಇದ್ದಿರುತ್ತದೆ. ಮನೆ ಮಂದಿಗೆ ವ್ಯಕ್ತಿ ಮೃತಪಟ್ಟ ವಿಷಯ ತಿಳಿಯದೆ, ಮೃತನ ಮನೆ ಮಂದಿ, ಕೂಲಿಮಾಡಲು ಹೋದ ನಮ್ಮ ಮಗ ಇಂದಲ್ಲ, ನಾಳೆ ಬರುತ್ತಾನೆ ಎಂಬ ಚಿಂತೆ, ಭರವಸೆಯಲ್ಲಿಯೇ ಊರಲ್ಲಿ ದಿನಕಳೆಯುತ್ತಾರೆ. ಊರಲ್ಲಿ ಅವನನ್ನು ನಂಬಿದ ತಂದೆ ತಾಯಿ, ಹೆಂಡತಿ ಮಕ್ಕಳು ಎಲ್ಲರೂ ಇರಬಹುದು. ಹಾಗಾಗಿ ವಲಸೆ ಕಾರ್ಮಿಕರನ್ನು ನೇಮಿಸಿಕೊಳ್ಳುವವರು ಕಾರ್ಮಿಕರ ವಿಳಾಸದ ಮೂಲ ದಾಖಲೆಗಳ ನೆರಳಚ್ಚು ಪ್ರತಿಗಳನ್ನು ತಮ್ಮ ಬಳಿ ಇಟ್ಟುಕೊಂಡರೆ, ಮೃತನ ವಾರಸುದಾರರನ್ನು ಸುಲಭವಾಗಿ ಇಲಾಖೆಗಳಿಗೆ ಪತ್ತೆ ಹಚ್ಚಲು ಸಾಧ್ಯವಾಗುತ್ತದೆ. ಕೆಲವು ವರ್ಷಗಳಿಂದ ಉಡುಪಿ ನಗರ ಮತ್ತು ಹೊರವಲಯಗಳಲ್ಲಿ ವಲಸೆ ಕಾರ್ಮಿಕರ ಮೃತದೇಹಗಳು ಕಂಡುಬರುವುದು ಅಧಿಕವಾಗಿದೆ. ಕಾರ್ಮಿಕ ಇಲಾಖೆ, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಈ ಬಗ್ಗೆ ಮಾನವೀಯತೆಯ ನೆಲೆಯಲ್ಲಿ ಚಿಂತಿಸಬೇಕಾಗಿದೆ.

Writer - -ತಾರಾನಾಥ್ ಮೇಸ್ತ, ಶಿರೂರು

contributor

Editor - -ತಾರಾನಾಥ್ ಮೇಸ್ತ, ಶಿರೂರು

contributor

Similar News