ಖ್ಯಾತ ಇತಿಹಾಸಕಾರ ಮುತ್ತಯ್ಯ ನಿಧನ

Update: 2019-04-20 16:38 GMT

ಚೆನ್ನೈ, ಎ.20: ಖ್ಯಾತ ಇತಿಹಾಸಕಾರ, ಸಾಹಿತಿ-ಪತ್ರಕರ್ತ ಎಸ್.ಮುತ್ತಯ್ಯ (89 ವರ್ಷ) ಚೆನ್ನೈಯಲ್ಲಿ ಶನಿವಾರ ನಿಧನರಾಗಿದ್ದಾರೆ ಎಂದು ಅವರ ಸ್ನೇಹಿತರಾಗಿರುವ ಇತಿಹಾಸಕಾರ ಶ್ರೀರಾಮ್ ವಿ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

1930ರಲ್ಲಿ ಅಂದಿನ ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ (ಈಗ ರಾಮನಾಥಪುರಂ ಜಿಲ್ಲೆ) ಜನಿಸಿದ ಮುತ್ತಯ್ಯ ಶ್ರೀಲಂಕಾದ ಕೊಲಂಬೋದಲ್ಲಿ ವಿದ್ಯಾಭ್ಯಾಸ ಮಾಡಿ, ಅಮೆರಿಕದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ನಂತರ ಪತ್ರಕರ್ತರಾಗಿ ವೃತ್ತಿಜೀವನ ಆರಂಭಿಸಿದ ಅವರು ಕೊಲಂಬೋದಲ್ಲಿ ‘ಟೈಮ್ಸ್ ಆಫ್ ಸಿಲೋನ್’ನಲ್ಲಿ 17 ವರ್ಷ ಕೆಲಸ ಮಾಡಿದರು. ಶ್ರೀಲಂಕಾದ ಪ್ರಜೆಗಳೇ ಪತ್ರಿಕೆಯ ಮುಖ್ಯ ಸಂಪಾದಕರಾಗಿರಬೇಕು ಎಂಬ ನಿಯಮದ ಕಾರಣ ಅವರಿಗೆ ಈ ಅವಕಾಶ ತಪ್ಪಿಹೋಯಿತು.

ಶ್ರೀಲಂಕಾದ ಪೌರತ್ವಕ್ಕೆ ಅವರು ಸಲ್ಲಿಸಿದ್ದ ಅರ್ಜಿ ತಿರಸ್ಕೃತಗೊಂಡಿತು. ಬಳಿಕ ಚೆನ್ನೈಗೆ ವಾಪಸಾದ ಮುತ್ತಯ್ಯ, ನೂತನವಾಗಿ ಆರಂಭಗೊಂಡ ಕೃಷ್ಣಮಾಚಾರಿ ಗ್ರೂಫ್‌ನ ಟಿಟಿ ಮ್ಯಾಪ್ಸ್ ಸಂಸ್ಥೆಯಲ್ಲಿ ನಕ್ಷೆಗಾರ (ಭೂಪಟ ಬರೆಯುವವರು)ನಾಗಿ ನೇಮಕಗೊಂಡರು. ಚೆನ್ನೈ ನಗರದ ಶ್ರೀಮಂತ ಇತಿಹಾಸ ಮತ್ತು ಪರಂಪರೆಯನ್ನು ಚಿತ್ರಿಸಿದ ಅವರ ಪ್ರಾಥಮಿಕ ಪುಸ್ತಕ ‘ಮದ್ರಾಸ್ ಡಿಸ್ಕವರ್ಡ್’ 1981ರಲ್ಲಿ ಪ್ರಕಟಗೊಂಡಿದೆ. ಚೆನ್ನೈಯ ಇತಿಹಾಸದ ಬಗ್ಗೆ ಅಧ್ಯಯನ ನಡೆಸುವವರಿಗೆ ಮಾರ್ಗದರ್ಶಿಯಾಗಿರುವ ಈ ಪುಸ್ತಕ ಹಲವು ಬಾರಿ ಪುನರ್ ಮುದ್ರಣಗೊಂಡಿದ್ದು ಬಳಿಕ ಈ ಪುಸ್ತಕಕ್ಕೆ ‘ಮದ್ರಾಸ್ ರಿ-ಡಿಸ್ಕವರ್ಡ್’ ಎಂದು ಮರುನಾಮಕರಣ ಮಾಡಲಾಯಿತು.

 ‘ದಿ ಹಿಂದು’ ಪತ್ರಿಕೆಯಲ್ಲಿ ಪ್ರತೀ ಸೋಮವಾರ ಪ್ರಕಟವಾಗುತ್ತಿದ್ದ ಮದ್ರಾಸ್ ಮಿಸ್ಸೆಲರಿ ಎಂಬ ಜನಪ್ರಿಯ ಅಂಕಣದ ಮೂಲಕ ಮುತ್ತಯ್ಯ ಹೆಸರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News