ಪ್ರಜ್ಞಾ ಸಿಂಗ್ ವಿರುದ್ಧ ‘ಸರ್ಜಿಕಲ್ ಸ್ಟ್ರೈಕ್ ಹೀರೋ’ ಲೆ.ಜ. ಹೂಡಾ ಆಕ್ರೋಶ

Update: 2019-04-21 13:21 GMT

ಹೊಸದಿಲ್ಲಿ, ಎ.21: ತನ್ನ ಶಾಪದಿಂದಾಗಿ 26/11ರ ಭಯೋತ್ಪಾದಕಿ ದಾಳಿ ವೇಳೆ ಹೇಮಂತ್ ಕರ್ಕರೆ ಸತ್ತರು ಎಂಬ ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ, ಬಿಜೆಪಿ ಅಭ್ಯರ್ಥಿ ಪ್ರಜ್ಞಾ ಸಿಂಗ್ ಹೇಳಿಕೆ ವಿರುದ್ಧ 2016ರಲ್ಲಿ ನಡೆದ ಸರ್ಜಿಕಲ್ ಸ್ಟ್ರೈಕ್ ನ ನೇತೃತ್ವ ವಹಿಸಿದ್ದ ಲೆಫ್ಟಿನೆಂಟ್ ಜನರಲ್ ಡಿ.ಎಸ್. ಹೂಡಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಹೌದು ಇದರಿಂದ ನೋವಾಗಿದೆ. ಪೊಲೀಸ್ ಅಥವಾ ಸೇನೆಯ ಯಾವುದೇ ಹುತಾತ್ಮರಿಗೆ ಎಲ್ಲಾ ಗೌರವಗಳನ್ನು ನೀಡಬೇಕು. ಇಂತಹ ಹೇಳಿಕೆಗಳು ಒಳ್ಳೆಯದಲ್ಲ” ಎಂದು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಹೂಡಾ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

ಬಿಜೆಪಿ ಅಭ್ಯರ್ಥಿಯಾದಾಗಿನಿಂದ ಪ್ರಜ್ಞಾ ಸಿಂಗ್ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹೇಮಂತ್ ಕರ್ಕರೆ ಬಗ್ಗೆ ಅವರು ನೀಡಿದ್ದ ಹೇಳಿಕೆ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಬಿಜೆಪಿ ಈ ಹೇಳಿಕೆಯಿಂದ ದೂರ ಸರಿದು, ‘ಇದು ಪ್ರಜ್ಞಾ ಸಿಂಗ್ ರ ವೈಯಕ್ತಿಕ ಹೇಳಿಕೆ. ಅವರು ಅನುಭವಿಸಿದ ಕಿರುಕುಳಗಳ ಕಾರಣ ಈ ಹೇಳಿಕೆ ನೀಡಿರುವ ಸಾಧ್ಯತೆ ಇದೆ” ಎಂದಿತ್ತು.

ಆನಂತರ ಪ್ರಜ್ಞಾ ಸಿಂಗ್ ಬಾಬರಿ ಮಸೀದಿ ಬಗ್ಗೆಯೂ ವಿವಾದಾತ್ಮಕ ಹೇಳಿಕೆ ನೀಡಿದ್ದು, ಎರಡು ಹೇಳಿಕೆಗಳಿಗೆ ಸಂಬಂಧಿಸಿ ಇವರಿಗೆ ಚುನಾವಣಾ ಆಯೋಗ ನೋಟಿಸ್ ಜಾರಿಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News