ಬಡವರನ್ನು ದೋಚಿ ಶ್ರೀಮಂತರಿಗೆ ಲಾಭ ಮಾಡಿದ ಮೋದಿಗೆ ಶಿಕ್ಷೆಯಾಗಲಿದೆ: ರಾಹುಲ್ ಗಾಂಧಿ

Update: 2019-04-22 15:05 GMT

ಹೊಸದಿಲ್ಲಿ,ಎ.22: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸರ್ವೋಚ್ಚ ನ್ಯಾಯಾಲಯದ ರಫೇಲ್ ತೀರ್ಪಿಗೆ ಸಂಬಂಧಿಸಿದಂತೆ ತನ್ನ ಹೇಳಿಕೆಗಳಿಗಾಗಿ ಸೋಮವಾರ ಅತ್ಯುನ್ನತ ನ್ಯಾಯಾಲಯದಲ್ಲಿ ವಿಷಾದ ವ್ಯಕ್ತಪಡಿಸಿದ ಬೆನ್ನಿಗೇ ‘ಕಮಲ ಛಾಪ್ ಚೌಕಿದಾರ್’ ನಿಜಕ್ಕೂ ಕಳ್ಳ ಎನ್ನುವುದನ್ನು ಜನತಾ ನ್ಯಾಯಾಲಯವು ಮೇ 23ರಂದು ನಿರ್ಧರಿಸಲಿದೆ ಎನ್ನುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮೇ 23ರಂದು ಲೋಕಸಭಾ ಚುನಾವಣಾ ಫಲಿತಾಂಶಗಳು ಪ್ರಕಟವಾಗಲಿವೆ.

ರಾಹುಲ್ ಗಾಂಧಿಯವರು ‘ಚೌಕಿದಾರ್ ನರೇಂದ್ರ ಮೋದಿ ಚೋರ್ ಹೈ’ ಎಂಬ ನಿಂದನೆಯನ್ನು ಮಾಡಲು ತನ್ನ ರಫೇಲ್ ತೀರ್ಪಿನಲ್ಲಿ ಯಾವುದೇ ಅವಕಾಶವಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಎ.15ರಂದು ಸ್ಪಷ್ಟಪಡಿಸಿತ್ತು.

ತನ್ನ ಹೇಳಿಕೆಗಳಿಗಾಗಿ ವಿಷಾದ ವ್ಯಕ್ತಪಡಿಸಿರುವ ರಾಹುಲ್,ಪ್ರಚಾರದ ಕಾವಿನಲ್ಲಿ ತಾನು ಈ ಹೇಳಿಕೆಯನ್ನು ನೀಡಿದ್ದು, ಇದನ್ನು ತನ್ನ ರಾಜಕೀಯ ವಿರೋಧಿಗಳು ದುರುಪಯೋಗಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಸರ್ವೋಚ್ಚ ನ್ಯಾಯಾಲಯದ ಘನತೆಯನ್ನು ತಗ್ಗಿಸುವ ಯಾವದೇ ಉದ್ದೇಶ ತನಗಿಲ್ಲ ಎಂದೂ ಅವರು ಹೇಳಿದ್ದಾರೆ.

ವಿಷಾದ ವ್ಯಕ್ತಪಡಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ಅಫಿದಾವತ್ತು ಸಲ್ಲಿಸಿದ ಬೆನ್ನಿಗೇ ‘ಕಮಲ ಛಾಪ್ ಚೌಕಿದಾರ್’ ನಿಜಕ್ಕೂ ಕಳ್ಳ ಎನ್ನುವುದನ್ನು ಜನತಾ ನ್ಯಾಯಾಲಯವು ಮೇ 23ರಂದು ನಿರ್ಧರಿಸಲಿದೆ. ಖಂಡಿತ ನ್ಯಾಯ ದೊರೆಯಲಿದೆ. ಬಡವರನ್ನು ದೋಚಿ ತನ್ನ ಶ್ರೀಮಂತ ಸ್ನೇಹಿತರಿಗೆ ಲಾಭವನ್ನು ಮಾಡಿಕೊಟ್ಟಿರುವ ಚೌಕಿದಾರ್‌ಗೆ ಶಿಕ್ಷೆಯಾಗಲಿದೆ ಎಂದು ಟ್ವೀಟಿಸಿದ್ದಾರೆ.

ರಾಹುಲ್ ಹೇಳಿಕೆಗಾಗಿ ಅವರ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮವನ್ನು ಜರುಗಿಸುವಂತೆ ಕೋರಿ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಅವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಎ.22ರಂದು ತನ್ನ ವಿವರಣೆಯನ್ನು ನೀಡುವಂತೆ ಸರ್ವೋಚ್ಚ ನ್ಯಾಯಾಲಯವು ರಾಹುಲ್‌ಗೆ ಆದೇಶಿಸಿತ್ತು. ನ್ಯಾಯಾಲಯವು ಮಂಗಳವಾರ ಲೇಖಿ ಅರ್ಜಿಯ ವಿಚಾರಣೆ ನಡೆಸಲಿದೆ.

ರಫೇಲ್ ಒಪ್ಪಂದ ಪ್ರಕರಣದಲ್ಲಿ ಸರಕಾರಕ್ಕೆ ‘ಕ್ಲೀನ್ ಚಿಟ್’ನೀಡಲಾಗಿದೆ ಎಂದು ಹೇಳಿಕೊಳ್ಳಲು ಮೋದಿಯವರೂ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಬಳಸಿಕೊಂಡಿದ್ದಾರೆ ಎಂದು ರಾಹುಲ್ ತನ್ನ ಅಫಿದಾವತ್ತಿನಲ್ಲಿ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News