ಕವಿಂದರ್ ಪಂಚ್‌ಗೆ ವಿಶ್ವಚಾಂಪಿಯನ್ ಚಿತ್

Update: 2019-04-22 18:29 GMT

ಬ್ಯಾಂಕಾಕ್, ಎ.22: ಹಾಲಿ ವಿಶ್ವ ಚಾಂಪಿಯನ್ ಕಝಕಿಸ್ತಾನದ ಕೈರಟ್ ಯೆರಾಲಿಯೆವ್‌ರನ್ನು ಕ್ವಾರ್ಟರ್‌ಫೈನಲ್‌ನಲ್ಲಿ ಮಣಿಸಿದ ಭಾರತದ ಕವಿಂದರ್ ಸಿಂಗ್ ಬಿಷ್ಟ್ (56 ಕೆಜಿ ವಿಭಾಗ) ಇಲ್ಲಿ ನಡೆಯುತ್ತಿರುವ ಏಶ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ದೇಶಕ್ಕೆ ಪದಕವನ್ನು ಖಚಿತಪಡಿಸಿದ್ದಾರೆ. ಇನ್ನೊಂದೆಡೆ ಮಹಿಳೆಯರ 57 ಕೆಜಿ ವಿಭಾಗದಲ್ಲಿ ಭಾರತದ ಸೋನಿಯಾ ಚಹಾಲ್ ಕೂಡ ನಾಲ್ಕರ ಘಟ್ಟಕ್ಕೆ ಲಗ್ಗೆಯಿಟ್ಟಿದ್ದಾರೆ.

ತೀವ್ರ ಪೈಪೋಟಿ ಕಂಡುಬಂದ ಪಂದ್ಯದಲ್ಲಿ ಯೆರಾಲಿಯೆವ್‌ರನ್ನು, ಫಿನ್‌ಲ್ಯಾಂಡ್‌ನಲ್ಲಿ ನಡೆದ ಜೀಬೀ ಟೂರ್ನಿಯಲ್ಲಿ ಬಂಗಾರದ ಪದಕ ಗೆದ್ದು ಬಂದಿದ್ದ ಕವಿಂದರ್ ಸೋಲಿಸಿ ಬೀಗಿದರು. ಪಂದ್ಯದ ಮೊದಲ ಮೂರು ನಿಮಿಷಗಳಲ್ಲಿ ಯೆರಾಲಿಯೆವ್ ಅವರು ಕವಿಂದರ್‌ರನ್ನು ಬಲೆಗೆ ಕೆಡವಲು ಯಶಸ್ವಿಯಾಗಿದ್ದರೂ ನಂತರದ ಎರಡು ಸುತ್ತುಗಳಲ್ಲಿ ಕಠಿಣ ಹೋರಾಟ ನೀಡಿದ ಕವಿಂದರ್ ಎದುರಾಳಿಯನ್ನು ಮಣ್ಣುಮುಕ್ಕಿಸುವಲ್ಲಿ ಯಶಸ್ವಿಯಾದರು.

ಕಳೆದ ವರ್ಷದ ಏಶ್ಯನ್ ಗೇಮ್ಸ್‌ನ ಕಂಚಿನ ಪದಕ ವಿಜೇತರೂ ಆಗಿದ್ದಾರೆ ಯೆರಾಲಿಯೆವ್.

ಸೋನಿಯಾ ಕೂಡ ರೋಚಕ ಹಣಾಹಣಿಯಲ್ಲಿ ಕೊರಿಯದ ಜೋ ಸಾನ್ ಹ್ವಾ ವಿರುದ್ಧ ಅದೇ ಮಾದರಿಯ ಪ್ರದರ್ಶನ ನೀಡಿ ಜಯದ ತೋರಣ ಕಟ್ಟಿದರು.

ಮತ್ತೊಂದೆಡೆ ರಾಷ್ಟ್ರೀಯ ಚಾಂಪಿಯನ್ ದೀಪಕ್(49 ಕೆಜಿ) ಕೂಡ ಸೆಮಿಫೈನಲ್‌ಗೆ ತಲುಪಿದ್ದಾರೆ. ಅವರ ಎದುರಾಳಿ ಅಫ್ಘಾನಿಸ್ತಾನದ ರಮಿಶ್ ರಹ್ಮಾನಿ ಗಾಯದ ಕಾರಣ ವಾಕ್‌ಓವರ್ ನೀಡಿದರು. ಆದಾಗ್ಯೂ ಲೊವ್ಲಿನಾ ಬೊರ್ಗೊಹೈನ್ (69 ಕೆಜಿ) ಕ್ವಾರ್ಟರ್‌ಫೈನಲ್‌ನಲ್ಲಿ ಹಾಲಿ ವಿಶ್ವ ಚಾಂಪಿಯನ್ ತೈವಾನ್‌ನ ಚೆನ್ ನಿಯೆನ್-ಚಿನ್ ವಿರುದ್ಧ ಸೋತು ಟೂರ್ನಿಯಿಂದ ಹೊರನಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News