ಮುಕ್ತ, ಪಾರದರ್ಶಕ ವಿಚಾರಣೆ ನಡೆಸುವಂತೆ ಸುಪ್ರೀಂ ಮೆಟ್ಟಿಲೇರಿದ 250ಕ್ಕೂ ಅಧಿಕ ಮಹಿಳೆಯರು

Update: 2019-04-24 15:43 GMT

ಹೊಸದಿಲ್ಲಿ, ಎ. 23: ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ವಿರುದ್ಧದ ಲೈಂಗಿಕ ಕಿರುಕುಳದ ಆರೋಪವನ್ನು 2013ರ ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ (ತಡೆ, ನಿಷೇಧ, ಪರಿಹಾರ) ಕಾಯ್ದೆಗೆ ಅನುಗುಣವಾಗಿ ಮುಕ್ತ ಹಾಗೂ ಪಾರದರ್ಶಕ ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿ ಕಾನೂನು, ಮಾನವ ಹಕ್ಕು ಹಾಗೂ ಶಿಕ್ಷಣ ಕ್ಷೇತ್ರದ 250ಕ್ಕೂ ಅಧಿಕ ಮಹಿಳೆಯರು ಬುಧವಾರ ಸುಪ್ರೀಂ ಕೋರ್ಟ್‌ಲ್ಲಿ ಮನವಿ ಮಾಡಿದ್ದಾರೆ.

ವಿಶ್ವಾಸಾರ್ಹ ವ್ಯಕ್ತಿಗಳನ್ನು ಒಳಗೊಂಡ ವಿಶೇಷ ವಿಚಾರಣಾ ಸಮಿತಿ ರೂಪಿಸಬೇಕು. ದೂರದಾರಳಿಗೆ ಆಕೆಯ ಆಯ್ಕೆಯ ಪ್ರಕಾರ ಕಾನೂನು ನೆರವು ನೀಡಬೇಕು. ವಿಚಾರಣೆ ಪೂರ್ಣಗೊಳ್ಳುವ ವರೆಗೆ ಗೊಗೊಯಿ ಅವರು ಕರ್ತವ್ಯ ನಿರ್ವಹಿಸದಂತೆ ನಿರ್ಬಂಧ ವಿಧಿಸಬೇಕು. ವಿಚಾರಣೆ 90 ದಿನಗಳ ಒಳಗೆ ಪೂರ್ಣಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಪತ್ರದಲ್ಲಿ ಮಹಿಳೆಯರು ಹೇಳಿದ್ದಾರೆ.

 ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರು ನಿವಾಸದ ಕಚೇರಿಯಲ್ಲಿ ಅಕ್ಟೋಬರ್ 10 ಹಾಗೂ 11ರಂದು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಸುಪ್ರೀಂ ಕೋರ್ಟ್‌ನ ಮಹಿಳಾ ಉದ್ಯೋಗಿಯೊಬ್ಬರು ಎಪ್ರಿಲ್ 19ರಂದು 22 ಮಂದಿ ನ್ಯಾಯಮೂರ್ತಿಗಳಿಗೆ ಪತ್ರ ಬರೆದು ಆರೋಪಿಸಿದ್ದರು. ಕಳೆದ ಕೆಲವು ತಿಂಗಳಿಂದ ತನ್ನ ಪತ್ನಿ ಹಾಗೂ ಕುಟುಂಬ ಗೊಗೊಯಿ ಅವರ ಕಿರುಕುಳಕ್ಕೆ ಒಳಗಾಗಿದೆ ಎಂದು ಕೂಡ ಅವರು ಹೇಳಿದ್ದರು. ಮಹಿಳೆಯ ಈ ಆರೋಪ ಕೇಳಿ ಬಂದ ಬಳಿಕ ಶನಿವಾರ ತುರ್ತು ವಿಚಾರಣೆ ನಡೆಸಲಾಯಿತು. ರಂಜನ್ ಗೊಗೊಯಿ ಅವರೇ ಮುಖ್ಯ ನ್ಯಾಯಮೂರ್ತಿಯಾಗಿದ್ದರು.

 ಈ ಆರೋಪ ತಳ್ಳಿ ಹಾಕಿದ ಗೊಗೊಯಿ, ತನ್ನ ಮುಖ್ಯ ನ್ಯಾಯಮೂರ್ತಿ ಹುದ್ದೆಯನ್ನು ಸಿಷ್ಕ್ರಿಯಗೊಳಿಸಲು ರೂಪಿಸಿದ ಅತಿ ದೊಡ್ಡ ಸಂಚು ಇದಾಗಿದೆ ಎಂದು ಹೇಳಿದ್ದರು. ಈ ಹಿಂದೆ ಆರುಂಧತಿ ರಾಯ್, ಮೇಧಾ ಪಾಟ್ಕರ್, ಅರುಣಾ ರಾಯ್, ಕಮಲಾ ಭಾಸಿನ್, ಬೆಜವಾಡ ವಿಲ್ಸನ್ ಹಾಗೂ ಅಂಜಲಿ ಭಾರದ್ವಾಜ್ ಸಹಿತ ಹಲವು ಹೋರಾಟಗಾರು, ಲೇಖಕರು ಹಾಗೂ ಶಿಕ್ಷಣ ತಜ್ಞರು ಈ ಆರೋಪದ ಕುರಿತು ಸ್ವತಂತ್ರ ತನಿಖೆ ನಡೆಸುವಂತೆ ಆಗ್ರಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News