ಮೈನ್‌ಪುರಿಯಲ್ಲಿ ಜಂಟಿ ರ‍್ಯಾಲಿ: ಮಾಯಾವತಿ ಪಾದ ಮುಟ್ಟಿ ನಮಸ್ಕರಿಸಿದ ಡಿಂಪಲ್
ಕನೌಜ್, ಎ. 26: ಮೈನ್‌ಪುರಿಯಲ್ಲಿ ನಡೆದ ಜಂಟಿ ರ‍್ಯಾಲಿಯಲ್ಲಿ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂಸಿಂಗ್ ಯಾದವ್, ಮಾಯಾವತಿ ಅವರ ಗುಣಗಾನ ಮಾಡಿದ ಬೆನ್ನಲ್ಲೇ ಅಖಿಲೇಶ್ ಯಾದವ್ ಪತ್ನಿ ಡಿಂಪಲ್, ಬಿಎಸ್ಪಿ ನಾಯಕಿಯ ಪಾದ ಮುಟ್ಟಿ ನಮಸ್ಕರಿಸಿರುವುದು ಸುದ್ದಿಯಾಗಿದೆ.
ಕನೌಜ್ ನಲ್ಲಿ ನಡೆದ ಬೃಹತ್ ರ‍್ಯಾಲಿಯಲ್ಲಿ ಮಾಯಾವತಿಯವರ ಪಾದಮುಟ್ಟಿ ನಮಸ್ಕರಿಸಿದ ಡಿಂಪಲ್ ಅವರನ್ನು ಮಾಯಾವತಿ ಹರಸಿದರು. ಎಸ್ಪಿ-ಬಿಎಸ್ಪಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಡಿಂಪಲ್ ಕನೌಜ್ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದಾರೆ. ಡಿಂಪಲ್ ಅವರ ಗೆಲುವು ಖಾತ್ರಿಪಡಿಸಲು ಉಭಯ ಪಕ್ಷಗಳ ಕಾರ್ಯಕರ್ತರು ಶ್ರಮಿಸಬೇಕು ಎಂದು ಮಾಯಾವತಿ ಕರೆ ನೀಡಿದರು.
"ಕಾರ್ಯಕರ್ತರಿಗೆ ಹಾಗೂ ಜನತೆಗೆ ಇದು ಸ್ಪಷ್ಟ ಹಾಗೂ ದಿಟ್ಟ ಸಂದೇಶ. ಉಭಯ ಪಕ್ಷಗಳ ಸಂಬಂಧ ಗಟ್ಟಿಯಾಗಿದ್ದು, ನಿರಂತರ" ಎಂದು ಮಾಯಾವತಿ ಘೋಷಿಸಿದರು.
"ಮೈತ್ರಿ ಬಳಿಕ ನಾನು ಹೃತ್ಪೂರ್ವಕವಾಗಿ ಈಕೆಯನ್ನು ನನ್ನ ಕುಟುಂಬದ ಸದಸ್ಯೆ ಹಾಗೂ ಸೊಸೆ ಎಂದು ಸ್ವೀಕರಿಸಿದ್ದೇನೆ. ಇದಕ್ಕೆ ಕಾರಣ ಅಖಿಲೇಶ್ ಯಾದವ್ ನನಗೆ, ಕುಟುಂಬದ ಹಿರಿಯರಿಗೆ ಸಾಕಷ್ಟು ಗೌರವ ನೀಡುತ್ತಾರೆ. ಅಖಿಲೇಶ್ ಪತ್ನಿ ಬಗ್ಗೆ ನನಗೂ ವಿಶೇಷವಾದ ಪ್ರೀತಿ ಇದೆ. ಇದು ಭವಿಷ್ಯದಲ್ಲೂ ಮುಂದುವರಿಯುತ್ತದೆ. ಇದೀಗ ನಿಮ್ಮ ಕರ್ತವ್ಯ ಆಕೆಗೆ ಮತ ಹಾಕುವುದು. ಹಿಂದೆ ಸಣ್ಣ ಅಂತರದಲ್ಲಿ ಡಿಂಪಲ್ ಗೆದ್ದಿದ್ದರು. ಈ ಬಾರಿ ಲಕ್ಷಾಂತರ ಮತಗಳಿಂದ ಗೆಲ್ಲಿಸಿ" ಎಂದು ಕರೆ ನೀಡಿದರು.