ಚಿನ್ನದ ಪದಕ ಬೇಟೆಯಾಡಿದ ಪಾಂಘಲ್, ಪೂಜಾ

Update: 2019-04-26 18:09 GMT

ಏಶ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್

ಬ್ಯಾಂಕಾಕ್, ಎ.26: ಭಾರತದ ಖ್ಯಾತ ಬಾಕ್ಸರ್ ಅಮಿತ್ ಪಾಂಘಲ್(52 ಕೆಜಿ ವಿಭಾಗ) ಶುಕ್ರವಾರ ಏಶ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಈ ವರ್ಷದಲ್ಲಿ ಸತತ ಎರಡನೇ ಬಂಗಾರಕ್ಕೆ ಕೊರಳೊಡ್ಡಿದರೆ, ಇನ್ನಿಬ್ಬರು ಭಾರತೀಯರು ರಜತ ಪದಕ ಮುಡಿಗೇರಿಸಿಕೊಂಡಿದ್ದಾರೆ. ಇದರೊಂದಿಗೆ ಭಾರತ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಒಟ್ಟು 13 ಪದಕಗಳನ್ನು ಬಾಚಿಕೊಂಡಿದೆ. ಅದರಲ್ಲಿ 2 ಬಂಗಾರ, 4 ಬೆಳ್ಳಿ ಹಾಗೂ 7 ಕಂಚಿನ ಪದಕಗಳು.

ಕಳೆದ ವರ್ಷ ಏಶ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಬಾಚಿಕೊಂಡಿದ್ದ ಪಾಂಘಲ್, ಏಕಪಕ್ಷೀಯವಾಗಿ ಮುಕ್ತಾಯಗೊಂಡ ಪಂದ್ಯದಲ್ಲಿ ಕೊರಿಯದ ಕಿಮ್ ಇಂಕ್ಯು ಅವರನ್ನು ಪರಾಭವಗೊಳಿಸಿದರು. ಇದೇ ವರ್ಷದ ಫೆಬ್ರವರಿಯಲ್ಲಿ ಬಲ್ಗೇರಿಯದಲ್ಲಿ ನಡೆದ ಸ್ಟ್ರಾಂಜಾ ಸ್ಮಾರಕ ಬಾಕ್ಸಿಂಗ್ ಟೂರ್ನಿಯಲ್ಲೂ ಅವರು ಚಿನ್ನಕ್ಕೆ ಮುತ್ತಿಟ್ಟಿದ್ದರು. ಆದಾಗ್ಯೂ ರಾಷ್ಟ್ರೀಯ ಚಾಂಪಿಯನ್ ದೀಪಕ್ ಸಿಂಗ್ (49 ಕೆಜಿ) ಹಾಗೂ ಕವಿಂದರ್ ಸಿಂಗ್ ಬಿಷ್ಟ್ (56 ಕೆಜಿ) ವೀರೋಚಿತ ಸೋಲುಂಡು ಬೆಳ್ಳಿ ಪದಕಗಳಿಗೆ ತೃಪ್ತರಾದರು. ತನಗಿಂತ ಸಣಕಲು ಆಗಿದ್ದ ಎದುರಾಳಿ ವಿರುದ್ಧ ಪಾಂಘಲ್ ಆಕ್ರಮಣಕಾರಿ ಆಟವನ್ನೇ ಆಡಿದರು. ಪಾಂಘಲ್ ಪಂಚ್‌ಗೆ ಕೊರಿಯ ಆಟಗಾರ ನಿರುತ್ತರರಾದರು. ಇದಕ್ಕೂ ಮೊದಲು ನಡೆದ ಫೈನಲ್ ಪಂದ್ಯದಲ್ಲಿ ದೀಪಕ್ ಸಿಂಗ್ ಅವರು ಉಝ್ಬೇಕಿಸ್ತಾನದ ನೊದಿರ್‌ಜೊನ್ ಮಿರ್ಝಾಹ್ಮದೊವ್ ವಿರುದ್ಧ ವಿವಾದಾತ್ಮಕ ಪಂದ್ಯದಲ್ಲಿ ಸೋಲು ಅನುಭವಿಸಿದರು. ಮತ್ತೊಂದೆಡೆ ಭಾರೀ ನಿರೀಕ್ಷೆ ಹುಟ್ಟಿಸಿದ್ದ ಕವಿಂದರ್ ಬಿಷ್ಟ್ ಅವರು ತಮ್ಮ ತೂಕ ವಿಭಾಗದ ಫೈನಲ್ ಪಂದ್ಯದಲ್ಲಿ ಉಝ್ಬೇಕಿಸ್ತಾನದ ಮಿರಝಿಝ್ಬೇಕ್ ಮಿರ್ಝಾಹಲಿಲೊವ್ ವಿರುದ್ಧ ಭಾರೀ ಅಂತರದ ಸೋಲನ್ನು ಕಂಡರು. ಉತ್ತರಾಖಂಡದ ಈ ಬಾಕ್ಸರ್ ತಮ್ಮ ಬಲಗಣ್ಣಿಗೆ ಬ್ಯಾಂಡೇಜ್ ಕಟ್ಟಿಕೊಂಡು ಆಡಿದರೂ ಎದುರಾಳಿ ಸ್ಪರ್ಧಿಯ ಸವಾಲನ್ನು ಮೀರಲಾಗಲಿಲ್ಲ. ಭಾರೀ ಪೈಪೋಟಿಯುತ ಸೆಮಿಫೈನಲ್ ಪಂದ್ಯದಲ್ಲಿ ಕವಿಂದರ್ ಕಣ್ಣಿಗೆ ಗಾಯ ಮಾಡಿಕೊಂಡಿದ್ದರು.

ವಿಶ್ವಚಾಂಪಿಯನ್‌ಗೆ ಸೋಲುಣಿಸಿದ ಪೂಜಾ

ಶುಕ್ರವಾರ ಪೂಜಾ ರಾಣಿ ಮೂಲಕ ಭಾರತ ತಂಡಕ್ಕೆ ಮತ್ತೊಂದು ಚಿನ್ನದ ಪದಕ ಒಲಿಯಿತು. ಮಹಿಳೆಯರ 81 ಕೆಜಿ ವಿಭಾಗದಲ್ಲಿ ಪೂಜಾ ಅವರು ಹಾಲಿ ವಿಶ್ವ ಚಾಂಪಿಯನ್ ವಾಂಗ್ ಲೀನಾ ಅವರನ್ನು ಮಣಿಸಿ ಬಂಗಾರಕ್ಕೆ ಕೊರಳೊಡ್ಡಿದರು. ಭಾರೀ ಪೈಪೋಟಿ ಕಂಡುಬಂದ ಪಂದ್ಯದಲ್ಲಿ ಪಾರಮ್ಯ ಮೆರೆದರು ಭಾರತದ ಪೂಜಾ. ಬಂಗಾರದ ಪದಕಗಳನ್ನು ಹೊರತುಪಡಿಸಿ ಸಿಮ್ರನ್‌ಜಿತ್ ಕೌರ್ ಅವರು 64 ಕೆಜಿ ವಿಭಾಗದ ಹಾಲಿ ವಿಶ್ವ ಚಾಂಪಿಯನ್ ಚೀನಾದ ಡೌ ಡಾನ್ ವಿರುದ್ಧ ಸೋತು ಬೆಳ್ಳಿಗೆ ತೃಪ್ತಿಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News