ಕಂಚಿನ ಪದಕಕ್ಕೆ ವಿನೇಶ್ ಫೋಗಟ್ ತೃಪ್ತಿ
ಕ್ಸಿಯಾನ್, ಎ.26: ಏಶ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ ವಿನೇಶ್ ಫೋಗಟ್ ಇಲ್ಲಿ ನಡೆಯುತ್ತಿರುವ ಏಶ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನ 53 ಕೆಜಿ ವಿಭಾಗದಲ್ಲಿ ಶುಕ್ರವಾರ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದಾರೆ.
ಜಕಾರ್ತ ಏಶ್ಯನ್ ಗೇಮ್ಸ್‌ನಲ್ಲಿ 50 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಅವರು ಚಿನ್ನ ಗೆದ್ದಿದ್ದರು. 2020 ಟೋಕಿಯೊ ಒಲಿಂಪಿಕ್ ಸ್ಪರ್ಧೆಗಳಿಗಾಗಿ ತೂಕ ವಿಭಾಗಗಳಲ್ಲಿ ಬದಲಾವಣೆಯಾದ ಬಳಿಕ ಅವರು 53 ಕೆಜಿ ವಿಭಾಗದಲ್ಲಿ ಸ್ಪರ್ಧೆ ನಡೆಸಬೇಕಿದೆ.
ಕಳೆದ ತಿಂಗಳು ಬಲ್ಗೇರಿಯದಲ್ಲಿ ನಡೆದ ಯುಡಬ್ಲುಡಬ್ಲು ಡಾನ್ ಕೊಲೊವ್ ನಿಕೊಲಾ ಪೆಟ್ರಾವ್ ಟೂರ್ನಿಯ 53 ಕೆಜಿ ವಿಭಾಗದಲ್ಲಿ ಅವರು ಸ್ಪರ್ಧಿಸಿ ಬೆಳ್ಳಿ ಪದಕ ಪಡೆದಿದ್ದರು. ಈ ಟೂರ್ನಿಯಲ್ಲಿ ಕಳಪೆ ಪ್ರದರ್ಶನದ ಮೂಲಕವೇ ಪ್ರಥಮ ಸುತ್ತಿನ ಪಂದ್ಯವನ್ನು ವಿನೇಶ್ ಆರಂಭಿಸಿದರು. ಅರ್ಹತಾ ಸುತ್ತಿನಲ್ಲಿ ಗೆದ್ದು ಬಂದ ಜಪಾನ್‌ನ ಮಯು ಮುಕೈಡಾ ವಿರುದ್ಧ 0-10ರಿಂದ ಅವರು ಸೋತರು. ಆದರೆ ಜಪಾನ್‌ನ ಅವರ ಎದುರಾಳಿ ಫೈನಲ್ ತಲುಪಿದ ಕಾರಣ ವಿನೇಶ್‌ಗೆ ರೆಪರೇಜ್ ಸುತ್ತಿನಲ್ಲಿ ಆಡುವ ಅವಕಾಶ ದೊರೆಯಿತು.
ರೆಪರೇಜ್ ಸುತ್ತಿನಲ್ಲಿ ಅವರು ತೈಪೇಯ ಜೊ ಕಿಹ್ ಚ್ಯು ವಿರುದ್ಧ 6-0 ಅಂಕಗಳಿಂದ ಜಯದ ತೋರಣ ಕಟ್ಟಿದರು. ಕಂಚಿನ ಪದಕ ಸುತ್ತಿನ ಪ್ಲೇ ಆಫ್‌ನಲ್ಲಿ ಭಾರತದ ಆಟಗಾರ್ತಿ ಚೀನಾದ ಕಿನ್ಯು ಪಾಂಗ್ ಅವರನ್ನು ಮಣಿಸಿ ಮುನ್ನುಗ್ಗಿದರು. ಮಹಿಳೆಯರ 72 ಕೆಜಿ ವಿಭಾಗದಲ್ಲಿ ಭಾರತದ ಕಿರಣ್ ಅವರು ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಕಝಕಿಸ್ತಾನದ ಝಮೀಲಾ ಬಕ್‌ಬೆರ್ಗೆನೊವಾ ವಿರುದ್ಧ 4-7 ಅಂಕಗಳ ಅಂತರದಿಂದ ಸೋಲುಂಡರು.
ಮತ್ತೊಂದು ಕಂಚು ತಂದ ಸಾಕ್ಷಿ ಮಲಿಕ್
ಒಲಿಂಪಿಕ್ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್ ಭಾರತಕ್ಕೆ ಮತ್ತೊಂದು ಕಂಚಿನ ಪದಕ ತಂದರು. ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ವಿಶ್ವ ಚಾಂಪಿಯನ್‌ಶಿಪ್‌ನ ಬೆಳ್ಳಿ ಪದಕ ವಿಜೇತ ಜಪಾನ್‌ನ ಯುಕಾಕೊ ಕವಾಯ್ ವಿರುದ್ಧ ಸಾಕ್ಷಿ ಸೋಲು ಕಂಡರು. ಆದರೆ ಕವಾಯ್ ಫೈನಲ್ ತಲುಪಿದ ಕಾರಣ ಸಾಕ್ಷಿಗೆ ರೆಪರೇಜ್ ಅವಕಾಶ ಲಭಿಸಿತು. ರೇಪರೇಜ್ ಸುತ್ತಿನಲ್ಲಿ ಕೊರಿಯದ ಜಿಯೆ ಚೊಯ್‌ರನ್ನು ಮಣಿಸಿದ ಸಾಕ್ಷಿ, ಆ ಬಳಿಕ ಕಂಚಿನ ಪದಕದ ಪ್ಲೇ ಆಫ್‌ನಲ್ಲಿ ಉತ್ತರ ಕೊರಿಯದ ಹ್ಯೋನ್ ಗ್ಯಾವೊಂಗ್‌ರನ್ನು ಸೋಲಿಸಿ ಪದಕಕ್ಕೆ ಮುತ್ತಿಕ್ಕಿದರು.