ಜೈಲಿನ ಕಿರುಕುಳದಿಂದ ಪ್ರಜ್ಞಾ ಠಾಕುರ್ ಗೆ ಕ್ಯಾನ್ಸರ್ ಎಂದ ಬಾಬಾ ರಾಮದೇವ್!

Update: 2019-04-27 07:26 GMT

ಪಾಟ್ನಾ, ಎ.27: ಬಿಜೆಪಿಯ ಭೋಪಾಲ್ ಅಭ್ಯರ್ಥಿ ಪ್ರಜ್ಞಾ ಠಾಕುರ್ ಬೆಂಬಲಕ್ಕೆ ಯೋಗ ಗುರು ರಾಮದೇವ್ ನಿಂತಿದ್ದಾರೆ. ಪ್ರಜ್ಞಾ ಠಾಕುರ್ ರನ್ನು ‘ರಾಷ್ಟ್ರೀಯವಾದಿ’ ಎಂದು ಬಣ್ಣಿಸಿದ ರಾಮದೇವ್ ಒಂಬತ್ತು ವರ್ಷ ಜೈಲುವಾಸದಲ್ಲಿದ್ದ ವೇಳೆ ಆಕೆಗೆ ನೀಡಲಾಗಿದೆಯೆನ್ನಲಾದ ಕಿರುಕುಳ ಆಕೆಯನ್ನು ಅದೆಷ್ಟು ಒತ್ತಡಕ್ಕೆ ಸಿಲುಕಿಸಿತ್ತೆಂದರೆ ಆಕೆ ಕ್ಯಾನ್ಸರ್ ರೋಗಕ್ಕೆ ತುತ್ತಾದರು ಎಂದು ಹೇಳಿದ್ದಾರೆ.

ಸದ್ಯ ಜಾಮೀನಿನ ಮೇಲಿರುವ ಆಕೆಯನ್ನು ಕೇವಲ ಶಂಕೆಯ ಆಧಾರದಲ್ಲಿ ಬಂಧಿಸಲಾಗಿದ್ದು, “ಆಕೆ ಉಗ್ರವಾದಿಯೆಂಬಂತೆ ಜೈಲಿನಲ್ಲಿ ಕಿರುಕುಳ ನೀಡಲಾಗಿತ್ತು'' ಎಂದಿದ್ದಾರೆ.

“ಅದು ಗುನಾಹ್ ಕಿ ಪರಾಕಾಷ್ಠ (ದೌರ್ಜನ್ಯದ ಪರಾಕಾಷ್ಠೆಯಾಗಿತ್ತು). ಒಬ್ಬ ವ್ಯಕ್ತಿಯನ್ನು ಕೇವಲ ಶಂಕೆಯ ಆಧಾರದಲ್ಲಿ ಬಂಧಿಸಿ ನಂತರ ಒಂಬತ್ತು ವರ್ಷಗಳ ಕಾಲ ಆಕೆ ದೈಹಿಕ, ಮಾನಸಿಕ ಕಿರುಕುಳಕ್ಕೊಳಗಾಗುವಂತೆ ಮಾಡಿದಾಗ ಆಕೆಗಾದ ಒತ್ತಡ ಆಕೆಯನ್ನು ದೈಹಿಕವಾಗಿ ದುರ್ಬಲಗೊಳಿಸಿ ಆಕೆ ಕ್ಯಾನ್ಸರ್ ರೋಗಕ್ಕೆ ತುತ್ತಾಗುವಂತಾಯಿತು. ಆಕೆ ಉಗ್ರವಾದಿಯಲ್ಲ. ಬದಲಾಗಿ ರಾಷ್ಟ್ರೀಯವಾದಿ ಮಹಿಳೆ'' ಎಂದು ರಾಮದೇವ್ ಸುದ್ದಿಗಾರರ ಜತೆ ಮಾತನಾಡುತ್ತಾ ಹೇಳಿದರು.

“ಈ ಮಹಿಳೆಗೆ ಸ್ವಲ್ಪ ಅನುಕಂಪ ತೋರಿಸಿ,  ಆಕೆ ಅನುಭವಿಸಿದ ಯಾತನೆಯಿಂದ ಆಕೆಯ ಮನಸ್ಸು ಕಹಿಯಾಗಿರಬೇಕೆಂದು ಅರಿಯಬೇಕು'' ಎಂದು ರಾಮದೇವ್ ಹೇಳಿದರು.

ಪ್ರಜ್ಞಾ ಠಾಕುರ್ ಪರ ಪ್ರಚಾರ ನಡೆಸುತ್ತೀರಾ ಎಂಬ ಪ್ರಶ್ನೆಗೆ, “ನಾನು ಹೇಳಿದ್ದೇ ನಿಮಗೆ  ಹೆಡ್ ಲೈನ್ಸ್ ಒದಗಿಸಿದೆ. ಅದರಿಂದ ಸಂತುಷ್ಟರಾಗಿ'' ಎಂದು ಹೇಳಿದರು.

ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಪಾಟ್ನಾ ಸಾಹಿಬ್ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುವಾಗ ಅವರ ಜತೆಗಿರಲು ಬಾಬಾ ರಾಮದೇವ್ ನಗರಕ್ಕಾಗಮಿಸಿದ್ದರು.x

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News