16ನೇ ವಯಸ್ಸಿನ ಆನಂತರದ ಸಮ್ಮತಿಯ ಲೈಂಗಿಕ ಕ್ರಿಯೆ: ಪೊಕ್ಸೊ ವ್ಯಾಪ್ತಿಯಿಂದ ಹೊರಗಿಡಲು ಮದ್ರಾಸ್ ಹೈಕೋರ್ಟ್ ಸೂಚನೆ

Update: 2019-04-27 18:05 GMT

 ಚೆನ್ನೈ, ಎ.27: 18 ವರ್ಷಕ್ಕಿಂತ ಕೆಳವಯಸ್ಸಿನ ಬಾಲಕಿ ಹಾಗೂ ಹದಿಹರೆಯ ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚು ಪ್ರಾಯದ ಹುಡುಗನ ಜೊತೆಗಿನ ಸಂಬಂಧವನ್ನು ‘ಪರಕೀಯ’ ಅಥವಾ ‘ಅಸಹಜ’ ಎಂದು ಪರಿಗಣಿಸಲು ಸಾಧ್ಯವಿಲ್ಲವೆಂದು ಮದ್ರಾಸ್ ಹೈಕೋರ್ಟ್ ಶನಿವಾರ ಅಭಿಪ್ರಾಯಿಸಿದೆ. 16 ರ ವಯಸ್ಸಿನ ಆನಂತರದ ವ್ಯಕ್ತಿಗಳ ಪರಸ್ಪರ ಸಮ್ಮತಿಯ ಲೈಂಗಿಕಕ್ರಿಯೆಯನ್ನು ಪೋಸ್ಕೊ ಕಾಯ್ದೆಯ ವ್ಯಾಪ್ತಿಯಿಂದ ಹೊರಗಿಡಬೇಕೆಂದು ಅದು ಸೂಚಿಸಿದೆ.

ಪ್ರಕರಣವೊಂದರಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳಿಗೆ ರಕ್ಷಣೆಯ ಕಾಯ್ದೆ (ಪೋಕ್ಸೊ)ಯಡಿ ನಾಮಕ್ಕಲ್‌ನ ಮಹಿಳಾ ನ್ಯಾಯಾಲಯವು ತನ್ನನ್ನು ಅಪರಾಧಿಯೆಂದು ಪರಿಗಣಿಸಿ, ತನಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿರುವುದನ್ನು ಪ್ರಶ್ನಿಸಿ ಶಬರಿ ಎಂಬಾತ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ವೇಳೆ ನ್ಯಾಯಮೂರ್ತಿ ವಿ. ಪಾರ್ಥಿಬನ್ ಈ ಅಭಿಪ್ರಾಯ ವ್ಯಕ್ತಪಡಿಸಿದರು.

  ಆರೋಪಿ ಶಬರಿಯು, 17 ವರ್ಷ ವಯಸ್ಸಿನ ಬಾಲಕಿಯನ್ನು ಅಪಹರಿಸಿ , ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆಂದು ದೂರುದಾರರು ಆರೋಪಿಸಿದ್ದರು.

  ಪೋಸ್ಕೊ ಕಾಯ್ದೆಗೆ ತಿದ್ದುಪಡಿಯ ಅಗತ್ಯವಿದೆಯೆಂದು ಪ್ರತಿಪಾದಿಸಿದ ನ್ಯಾಯಾಧೀಶರು ‘‘ 16ರ ವಯಸ್ಸಿನ ಆನಂತಕ ಪರಸ್ಪರ ಸಮ್ಮತಿಯ ಲೈಂಗಿಕ ಕ್ರಿಯೆ ಅಥವಾ ದೈಹಿಕ ಸಂಪರ್ಕ ಅಥವಾ ಅದಕ್ಕೆ ಸಂಬಂಧಿಸಿದ ಕೃತ್ಯಗಳನ್ನು ಕಠಿಣವಾದ ಪೋಸ್ಕೊ ಕಾಯ್ದೆಯ ನಿಯಮಾವಳಿಗಳಿಂದ ಹೊರತುಪಡಿಸಬೇಕು ಹಾಗೂ ಅಂತಹ ಲೈಂಗಿಕ ಹಲ್ಲೆಯ ಪ್ರಕರಣಗಳನ್ನು ಹೆಚ್ಚು ಉದಾರತೆಯ ಕಾನೂನಿನಡಿಯಲ್ಲಿ ವಿಚಾರಣೆಗೊಳಪಡಿಸಬೇಕಾಗಿದೆ’’ ಎಂದು ಅಭಿಪ್ರಾಯಿಸಿದ್ದರು.

   ಅಪರಾಧಿಯ ವಯಸ್ಸು ಹಾಗೂ ಸಮ್ಮತಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಂಡ 16 ವರ್ಷ ಅಥವಾ ಅದಕ್ಕಿಂತ ಅಧಿಕ ವಯಸ್ಸಿನ ಸಂತ್ರಸ್ತ ಬಾಲಕಿಯ ವಯಸ್ಸಿನ ನಡುವಿನ ಅಂತರ 5 ವರ್ಷಗಳಿಗಿಂತ ಹೆಚ್ಚಿರಕೂಡದು. ಹೀಗಾಗಿ ಅಧಿಕ ವಯಸ್ಸಿನ ವ್ಯಕ್ತಿಗೆ, ಅಪ್ರಾಪ್ತ ವಯಸ್ಸಿನ ಸಂತ್ರಸ್ತೆಯ ಮುಗ್ಧತೆಯನ್ನು ದುರುಪಯೋಗಪಡಿಸಿಕೊಳ್ಳಲಾಗದು ’’ ಎಂದು ನ್ಯಾಯಾಧೀಶರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News