×
Ad

ಬಾರ್ಸಿಲೋನ ಮಡಿಲಿಗೆ ಲಾ ಲಿಗ ಪ್ರಶಸ್ತಿ

Update: 2019-04-28 23:44 IST

ನೌಕ್ಯಾಂಪ್, ಎ.28: ಲಿಯೊನೆಲ್ ಮೆಸ್ಸಿ ಮ್ಯಾಜಿಕ್ ನೆರವಿನಿಂದ ಲೆವಾಂಟೆ ತಂಡದ ವಿರುದ್ಧ 1-0 ಅಂತರದ ಗೆಲುವು ದಾಖಲಿಸಿದ ಬಾರ್ಸಿಲೋನ ಸ್ಪಾನಿಶ್ ಲಾ ಲಿಗ ಪ್ರಶಸ್ತಿ ಗೆದ್ದುಕೊಂಡಿದೆ. ಇದು ಬಾರ್ಸಿಲೋನ ಜಯಿಸಿದ 26ನೇ ಲಾ ಲಿಗ ಪ್ರಶಸ್ತಿಯಾಗಿದೆ.

ದ್ವಿತೀಯಾರ್ಧದಲ್ಲಿ ಮೈದಾನಕ್ಕಿಳಿದ ಐದು ಬಾರಿ ಬ್ಯಾಲನ್ ಡಿ ಓರ್ ಪ್ರಶಸ್ತಿ ವಿಜೇತ ಆಟಗಾರ ಮೆಸ್ಸಿ 61ನೇ ನಿಮಿಷದಲ್ಲಿ ಅರ್ಟರೊ ವಿಡಾಲ್ ನೀಡಿದ ಹೆಡರ್‌ನ ಸಹಾಯದಿಂದ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿದರು. ಈ ಮೂಲಕ 5 ವರ್ಷಗಳಲ್ಲಿ 4ನೇ ಬಾರಿ ಬಾರ್ಸಿಲೋನ ಲೀಗ್ ಪ್ರಶಸ್ತಿ ಜಯಿಸಲು ನೆರವಾದರು. ಮೆಸ್ಸಿ ಇದೀಗ ಲಾ ಲಿಗ ಟೂರ್ನಿಯಲ್ಲಿ ಅತ್ಯಂತ ಹೆಚ್ಚು ಗೋಲು (24)ಗಳಿಸಿದ ಬದಲಿ ಆಟಗಾರ ಎನಿಸಿಕೊಂಡಿದ್ದಾರೆ. ಬಾರ್ಸಿಲೋನ ತಂಡದ ಪರ 10ನೇ ಬಾರಿ ಲಾಲಿಗ ಪ್ರಶಸ್ತಿ ಎತ್ತಿ ಹಿಡಿದರು.

ಬಾರ್ಸಿಲೋನ ಒಂದು ಗೋಲು ಅಂತರ ದಿಂದ ಗೆಲುವು ಸಾಧಿಸಿದ ಬೆನ್ನಿಗೆ ನೌ ಕ್ಯಾಂಪ್ ಸ್ಟೇಡಿಯಂನಲ್ಲಿ ನೆರೆದಿದ್ದ 90,000ಕ್ಕೂ ಅಧಿಕ ಫುಟ್ಬಾಲ್ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು.

ಲೆವಾಂಟೆ ತಂಡ ಪಂದ್ಯದ ಕೊನೆಯ ಹಂತದಲ್ಲಿ ಚೆಂಡನ್ನು ಗುರಿ ತಲುಪಿಸಲು ವಿಫಲ ಯತ್ನ ನಡೆಸಿತು. 35 ಪಂದ್ಯ ಗಳಲ್ಲಿ 83 ಅಂಕ ಕಲೆ ಹಾಕಿರುವ ಬಾರ್ಸಿ ಲೋನ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಕಾಯ್ದು ಕೊಂಡಿದೆ. ಎರಡನೇ ಸ್ಥಾನದಲ್ಲಿರುವ ಅಟ್ಲೆಟಿಕೊ ಮ್ಯಾಡ್ರಿಡ್‌ಗಿಂತ 9 ಅಂಕ ಮುಂದಿದೆ. ಲಾ ಲಿಗ ಚಾಂಪಿಯನ್ ಆಗಿರುವ ಬಾರ್ಸಿಲೋನ ಇದೀಗ ಚಾಂಪಿಯನ್ಸ್ ಲೀಗ್ ಪ್ರಶಸ್ತಿ ಗೆಲ್ಲುವತ್ತ ಚಿತ್ತ ಹರಿಸಲಿದೆ. 2015ರ ಬಳಿಕ ಮೊದಲ ಬಾರಿ ಪ್ರಶಸ್ತಿ ನಿರೀಕ್ಷೆಯಲ್ಲಿರುವ ಬಾರ್ಸಿಲೋನ ಬುಧವಾರ ಚಾಂಪಿಯನ್ಸ್ ಲೀಗ್ ಸೆಮಿ ಫೈನಲ್‌ನಲ್ಲಿ ಲಿವರ್‌ಪೂಲ್ ತಂಡವನ್ನು ಎದುರಿಸಲಿದೆ.

►10 ಲಾ ಲಿಗ ಪ್ರಶಸ್ತಿ ಜಯಿಸಿದ ಬಾರ್ಸಿಲೋನದ ಮೊದಲ ಆಟಗಾರ ಮೆಸ್ಸಿ

ಏಕೈಕ ಗೋಲು ಗಳಿಸಿ ಬಾರ್ಸಿಲೋನಕ್ಕೆ 26ನೇ ಲಾಲಿಗ ಪ್ರಶಸ್ತಿ ಗೆಲ್ಲಿಸಿಕೊಟ್ಟಿರುವ ಲಿಯೊನೆಲ್ ಮೆಸ್ಸಿ ಇತಿಹಾಸದ ಪುಸ್ತಕದಲ್ಲಿ ಮತ್ತೊಂದು ಪುಟ ತೆರೆದಿದ್ದಾರೆ. 10 ಲೀಗ್ ಪ್ರಶಸ್ತಿಗಳನ್ನು ಜಯಿಸಿರುವ ಕ್ಲಬ್‌ನ ಮೊದಲ ಆಟ ಗಾರನೆಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಮೆಸ್ಸಿ 2005ರಲ್ಲಿ ಬಾರ್ಕಾ ಪರ ಮೊದಲ ಬಾರಿ ಪ್ರಶಸ್ತಿ ಜಯಿಸಿದ್ದರು. ಆಗ ಅವರಿಗೆ 17 ವರ್ಷ ವಯಸ್ಸಾಗಿತ್ತು. ವರ್ಷದ ಬಳಿಕ ಎರಡನೇ ಬಾರಿ ಲಾ ಲಿಗ ಪ್ರಶಸ್ತಿ ಬಾಚಿಕೊಂಡಿದ್ದರು.

ಕಳೆದ 8 ಪ್ರಶಸ್ತಿ ಗೆಲುವಿನ ಹಿಂದೆ ಮೆಸ್ಸಿಯ ಶ್ರಮವಿದೆ. ಮೆಸ್ಸಿ ಪ್ರವರ್ಧಮಾನಕ್ಕೆ ಬಂದ ಬಳಿಕ 2009ರಲ್ಲಿ ಪೆಪ್ ಗ್ವಾರ್ಡಿಯೊಲಾ ಮಾರ್ಗದರ್ಶನದಲ್ಲಿ ಮತ್ತೊಂದು ಪ್ರಶಸ್ತಿ ಜಯಿಸಿದ್ದರು.

ಲೆವಾಂಟೆ ಎದುರು ಲಾ ಲಿಗ ಪಂದ್ಯದಲ್ಲಿ 597ನೇ ಗೋಲು ಗಳಿಸಿದ ಮೆಸ್ಸಿ ಪ್ರಶಸ್ತಿ ಗೆಲುವಿನ ರೂವಾರಿಯಾದರು. 26ನೇ ಲಾಲಿಗ ಪ್ರಶಸ್ತಿ ಜಯಿಸಿದ ಬಾರ್ಸಿಲೋನ, ರಿಯಲ್ ಮ್ಯಾಡ್ರಿಡ್ ದಾಖಲೆ(33) ಮುರಿಯುವುದಕ್ಕೆ ಏಳು ಪ್ರಶಸ್ತಿ ಅಗತ್ಯವಿದೆ.

ಈ ಋತುವಿನಲ್ಲಿ ಬಾರ್ಸಿಲೋನದ ನಾಯಕತ್ವವಹಿಸಿಕೊಂಡಿರುವ ಮೆಸ್ಸಿ ತನ್ನ ಉತ್ತರಾಧಿಕಾರಿ ಅಂಡ್ರೆಸ್ ಇನಿಯೆಸ್ಟಾ ಅವರ 9 ಲೀಗ್ ಪ್ರಶಸ್ತಿ ದಾಖಲೆಯನ್ನು ಮುರಿದರು. ಯುರೋಪ್‌ನ ಅಗ್ರ-5 ಕ್ಲಬ್‌ಗಳ ಪೈಕಿ ಒಂದೇ ಕ್ಲಬ್ ಪರ 10 ಪ್ರಶಸ್ತಿಗಳನ್ನು ಜಯಿಸಿದ ಆಯ್ದ ಗುಂಪಿನ ಆಟಗಾರರ ಸಾಲಿಗೆ ಮೆಸ್ಸಿ ಸೇರ್ಪಡೆಯಾದರು.

ರಿಯಲ್ ಮ್ಯಾಡ್ರಿಡ್‌ನ ಮಾಜಿ ವಿಂಗರ್ ಪಾಕೊ ಜೆಂಟೊ 12 ಸ್ಪಾನಿಶ್ ಲೀಗ್ ಪ್ರಶಸ್ತಿ ಜಯಿಸಿ ದಾಖಲೆ ನಿರ್ಮಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News