ಒಂಬತ್ತು ರಾಜ್ಯಗಳಲ್ಲಿ ನಾಲ್ಕನೇ ಹಂತದ ಮತದಾನ ಆರಂಭ

Update: 2019-04-29 03:42 GMT

ಹೊಸದಿಲ್ಲಿ, ಎ.29: ಪ್ರಸಕ್ತ ಲೋಕಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನ ಇಂದು ಬೆಳಗ್ಗೆ ಆರಂಭವಾಗಿದ್ದು, ಕೆಲ ತಿಂಗಳುಗಳ ಹಿಂದಷ್ಟೇ ಬಿಜೆಪಿ ಹೀನಾಯ ಸೋಲು ಕಂಡ ರಾಜಸ್ಥಾನ ಹಾಗೂ ಮಧ್ಯಪ್ರದೇಶ ಸೇರಿದಂತೆ ಒಂಬತ್ತು ರಾಜ್ಯಗಳ 72 ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ.

ಪಶ್ಚಿಮ ಬಂಗಾಳದ ಕೆಲ ಮತಗಟ್ಟೆಗಳಲ್ಲಿ ಇವಿಎಂ ಸಮಸ್ಯೆಯಿಂದಾಗಿ ಮತದಾನ ವಿಳಂಬವಾಗಿ ಆರಂಭಗೊಂಡಿತ್ತು. ಮುಂಬೈನ ಜಿ.ಡಿ.ಸೋಮಾಲಿ ಶಾಲೆಯ ಮತಗಟ್ಟೆಯಲ್ಲಿ ಉದ್ಯಮಿ ಅನಿಲ್ ಅಂಬಾನಿ ಮತ ಚಲಾಯಿಸಿದರು. ಮುಂಬೈ ದಕ್ಷಿಣ ಕ್ಷೇತ್ರದಲ್ಲಿ ಮುಂಜಾನೆಯೇ ಮತದಾರರು ಅತ್ಯುತ್ಸಾಹದಿಂದ ಮತಗಟ್ಟೆ ಎದುರು ಸಾಲುಗಟ್ಟಿ ನಿಂತಿರುವ ದೃಶ್ಯ ಕಂಡುಬಂದಿದೆ.

ದೇಶದ ವಾಣಿಜ್ಯ ರಾಜಧಾನಿ ಎನಿಸಿದ ಮುಂಬೈ ಮತದಾರರು ಕೂಡಾ ಇಂದು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಮಧ್ಯಪ್ರದೇಶದ ಆರು, ರಾಜಸ್ಥಾನದ 13 ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದೆ. ಕೆಲ ತಿಂಗಳ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಈ ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಬಿಜೆಪಿಯಿಂದ ಅಧಿಕಾರ ಕಿತ್ತುಕೊಂಡಿರುವ ಹಿನ್ನೆಲೆಯಲ್ಲಿ ಬಿಜೆಪಿಗೆ ಈ ಚುನಾವಣೆ ಅಗ್ನಿಪರೀಕ್ಷೆಯಾಗಿದೆ. ಆರು ಕೇಂದ್ರ ಸಚಿವರು ಸೇರಿದಂತೆ ಹಲವು ಮಂದಿ ಗಣ್ಯರು ಈ ಸುತ್ತಿನಲ್ಲಿ ಕಣದಲ್ಲಿದ್ದಾರೆ. ಏಳು ಹಂತಗಳ ಚುನಾವಣಾ ಪ್ರಕ್ರಿಯೆ ಮೇ 19ರಂದು ನಡೆಯಲಿದ್ದು, ಮೇ 23ರಂದು ಎಣಿಕೆ ಕಾರ್ಯ ನಡೆಯಲಿದೆ.

ಮಹಾರಾಷ್ಟ್ರದ 17, ರಾಜಸ್ಥಾನ ಹಾಗೂ ಉತ್ತರ ಪ್ರದೇಶದ ತಲಾ 13, ಪಶ್ಚಿಮ ಬಂಗಾಳದ 8, ಮಧ್ಯಪ್ರದೇಶ ಹಾಗೂ ಒಡಿಶಾದ ತಲಾ 6, ಬಿಹಾರದ 5, ಜಾರ್ಖಂಡ್‌ನ 3 ಹಾಗೂ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಕ್ಷೇತ್ರದ ಭಾಗಶಃ ಮತಗಟ್ಟೆಗಳಲ್ಲಿ ಮತದಾನ ಪ್ರಗತಿಯಲ್ಲಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮಧ್ಯಪ್ರದೇಶ ಹಾಗೂ ರಾಜಸ್ಥಾನದ 54 ಸ್ಥಾನಗಳ ಪೈಕಿ 52ನ್ನು ಗೆದ್ದುಕೊಂಡಿತ್ತು.

ಮುಂಬೈನ ಕ್ಷೇತ್ರಗಳು ದೇಶದ ಗಮನ ಸೆಳೆದಿದ್ದು, ಉತ್ತರ ಕೇಂದ್ರ ಮುಂಬೈನಲ್ಲಿ ಕಾಂಗ್ರೆಸ್‌ನ ಪ್ರಿಯಾ ದತ್ ವಿರುದ್ಧ ಬಿಜೆಪಿಯ ಪೂನಮ್ ಮಹಾಜನ್ ಸೆಣೆಸುತ್ತಿದ್ದಾರೆ. ಬಿಜೆಪಿಯ ಹಾಲಿ ಸಂಸದ ಗೋಪಾಲ್ ಶೆಟ್ಟಿಯವರು ಮುಂಬೈ ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಊರ್ಮಿಳಾ ಮಾತೋಂಡ್ಕರ್ ಅವರ ಸವಾಲು ಎದುರಿಸಬೇಕಿದೆ. ಮುಂಬೈ ದಕ್ಷಿಣ ಕ್ಷೇತ್ರದಿಂದ ಶಿವಸೇನೆಯ ಹಾಲಿ ಸಂಸದ ಅರವಿಂದ್ ಸಾವಂತ್ ವಿರುದ್ಧ ಕಾಂಗ್ರೆಸ್ ಮುಖಂಡ ಮಿಲಿಂದ ದೇವೂರ ಕಣದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News