​ಅಕ್ರಮ ಮತದಾನ ನಿಜ: ಕಾಂಗ್ರೆಸ್ ಆರೋಪಕ್ಕೆ ಚುನಾವಣಾ ಆಯೋಗ ಸಹಮತ

Update: 2019-04-30 03:58 GMT

ತಿರುವನಂತಪುರ, ಎ. 30: ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನದ ವೇಳೆ ಕಾಸರಗೋಡು ಲೋಕಸಭಾ ಕ್ಷೇತ್ರದ ಕಣ್ಣೂರು ಜಿಲ್ಲೆಯಲ್ಲಿ ನಕಲಿ ಮತದಾನವಾಗಿರುವುದು ನಿಜ ಎಂದು ಕೇರಳದ ಮುಖ್ಯ ಚುನಾವಣಾ ಅಧಿಕಾರಿ ಟಿ.ಆರ್.ಮೀನಾ ಒಪ್ಪಿಕೊಂಡಿದ್ದಾರೆ.

ಎ.23ರಂದು ಮತದಾನ ಮುಗಿದ ತಕ್ಷಣ, ನಿಯಮಾವಳಿಗೆ ವಿರುದ್ಧವಾಗಿ ಮೂವರು ಮಹಿಳೆಯರು ಎರಡು ಬಾರಿ ಮತ ಚಲಾಯಿಸಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ಆಪಾದಿಸಿ, ಆರೋಪಕ್ಕೆ ಪುರಾವೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಈ ಸಂಬಂಧ ವೀಡಿಯೊ ಪೋಸ್ಟ್ ಮಾಡಿತ್ತು.

"ಕಣ್ಣೂರು ಜಿಲ್ಲೆಯ ಚುನಾವಣೆ ಅಧಿಕಾರಿ ಸಲ್ಲಿಸಿದ ಪ್ರಾಥಮಿಕ ವರದಿಯಲ್ಲಿ, ಮೂವರು ಮಹಿಳೆಯರು ಎರಡು ಬಾರಿ ಮತ ಚಲಾಯಿಸಿದ್ದನ್ನು ದೃಢಪಡಿಸಲಾಗಿದೆ. ಈ ಪೈಕಿ ಇಬ್ಬರು ಆ ನಿರ್ದಿಷ್ಟ ಮತಗಟ್ಟೆ ವ್ಯಾಪ್ತಿಯ ನಿವಾಸಿಗಳೂ ಅಲ್ಲ. ಈ ಮಹಿಳೆಯರು ಎಲ್‌ಡಿಎಫ್ ಬೆಂಬಲಿಗರು ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ" ಎಂದು ಮೀನಾ ಸ್ಪಷ್ಟಪಡಿಸಿದ್ದಾರೆ.

"ಈ ಮೂವರು ಮಹಿಳೆಯರ ವಿರುದ್ಧ ಪೊಲೀಸರಿಗೆ ದೂರು ನೀಡುವಂತೆ ಚುನಾವಣಾ ಅಧಿಕಾರಿಗೆ ಸೂಚಿಸಲಾಗಿದೆ. ತಮ್ಮ ಚುನಾವಣಾ ಕರ್ತವ್ಯವನ್ನು ನಿಭಾಯಿಸಲು ವಿಫಲವಾದ ಮತಗಟ್ಟೆ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News