ಹೇಮಂತ್ ಕರ್ಕರೆ ಕಾರ್ಯನಿರ್ವಹಣೆ ‘ಸಂಶಯಾತೀತವಲ್ಲ’ ಎಂದ ಸುಮಿತ್ರಾ ಮಹಾಜನ್!

Update: 2019-04-30 07:57 GMT

ಭೋಪಾಲ್, ಎ.30: ಉಗ್ರರಿಂದ ಹತರಾದ ಮಹಾರಾಷ್ಟ್ರ ಎಟಿಎಸ್ ಮಾಜಿ ಮುಖ್ಯಸ್ಥ ಹೇಮಂತ್ ಕರ್ಕರೆ ಕುರಿತಂತೆ ಭೋಪಾಲದ ಬಿಜೆಪಿ ಅಭ್ಯರ್ಥಿ ಪ್ರಜ್ಞಾ ಸಿಂಗ್ ಠಾಕುರ್ ನೀಡಿದ ಹೇಳಿಕೆಯಿಂದ ಎದ್ದ ವಿವಾದ ತಣ್ಣಗಾಗುವ ಮೊದಲೇ ನಿರ್ಗಮನ ಲೋಕಸಭಾ ಸ್ಪೀಕರ್ ಹಾಗೂ ಇಂದೋರ್ ಕ್ಷೇತ್ರದ ಹಾಲಿ ಸಂಸದೆ ಸುಮಿತ್ರಾ ಮಹಾಜನ್ ಕರ್ಕರೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕರ್ತವ್ಯದ ವೇಳೆ ಹತರಾಗಿದ್ದರಿಂದ ಕರ್ಕರೆ ‘ಹುತಾತ್ಮ’ರೆಂದು ಪರಿಗಣಿತರಾಗಿದ್ದಾರೆ. ಆದರೆ ಮಹಾರಾಷ್ಟ್ರ ಎಟಿಎಸ್ ಮುಖ್ಯಸ್ಥರಾಗಿ ಅವರ ಪಾತ್ರ ‘ಸಂಶಯಾತೀತವಲ್ಲ’ ಎಂದು ಸುಮಿತ್ರಾ ಮಹಾಜನ್ ಹೇಳಿದ್ದಾರೆ.

“ಹೇಮಂತ್ ಕರ್ಕರೆ ಬಗ್ಗೆ ಎರಡು ವಿಚಾರಗಳಿವೆ, ಅವರು ಕರ್ತವ್ಯ ನಿರ್ವಹಿಸುವ ವೇಳೆ ಸಾವಿಗೀಡಾಗಿದ್ದರಿಂದ ಹುತಾತ್ಮರಾಗಿದ್ದಾರೆ. ಆದರೆ ಒಬ್ಬ ಪೊಲೀಸ್ ಅಧಿಕಾರಿಯಾಗಿ ಅವರು ಮಾಡಿದ್ದು ಸರಿಯಲ್ಲವೆಂದರೆ ಅದು ಸರಿಯಲ್ಲ ಎಂದು ನಾವು ಹೇಳುತ್ತೇವೆ'' ಎಂದು ಮಾಧ್ಯಮವೊಂದರ ಜತೆ ಮಾತನಾಡುತ್ತಾ ಸುಮಿತ್ರಾ ಮಹಾಜನ್ ಹೇಳಿದ್ದಾರೆ.

ತಮ್ಮ ಬಳಿ ಯಾವುದೇ ಪುರಾವೆಯಿಲ್ಲವಾದರೂ ಕಾಂಗ್ರೆಸ್ ನಾಯಕ ಹಾಗೂ ಆ ಪಕ್ಷದ ಭೋಪಾಲ್ ಅಭ್ಯರ್ಥಿ ದಿಗ್ವಿಜಯ್ ಸಿಂಗ್ ಅವರು ಕರ್ಕರೆಯ ಸ್ನೇಹಿತರಾಗಿದ್ದಾರೆಂದು ತಾವು ಕೇಳಿದ್ದಾಗಿ ತಿಳಿಸಿದ್ದಾರೆ.

“ಸಿಂಗ್ ಅವರು ಮಧ್ಯ ಪ್ರದೇಶ ಸಿಎಂ ಆಗಿದ್ದಾಗ ಆರೆಸ್ಸೆಸ್ ಬಾಂಬ್ ತಯಾರಿಸುತ್ತದೆ ಹಾಗೂ ಉಗ್ರ ಸಂಸ್ಥೆಯಾಗಿದೆ ಎಂದು ಆಗಾಗ ಆರೋಪಿಸುತ್ತಿದ್ದರು. ಮಹಾರಾಷ್ಟ್ರ ಎಟಿಎಸ್ ಇಂದೋರ್ ನಗರದಲ್ಲಿ ನಡೆಸಿದ ಬಂಧನಗಳು ಮಾಜಿ ಸಿಎಂ ಸಿಂಗ್ ಅವರ ಅಣತಿಯಂತೆ ನಡೆದಿತ್ತು” ಎಂದು ಮಹಾಜನ್ ಆರೋಪಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ದಿಗ್ವಿಜಯ ಸಿಂಗ್, “ನೀವು ಅಶೋಕ ಚಕ್ರ ಪ್ರಶಸ್ತಿ ಪುರಸ್ಕೃತ ಹೇಮಂತ್ ಕರ್ಕರೆ ಜತೆ ನನಗೆ ನಂಟು ಕಲ್ಪಿಸಿದ್ದಕ್ಕೆ ಹೆಮ್ಮೆಯಿದೆ. ನಿಮ್ಮ ಸಮೀಪವರ್ತಿಗಳು ಅವರನ್ನು ಅವಮಾನಿಸಿರಬಹುದು. ಆದರೆ ದೇಶದ ಹಿತಾಸಕ್ತಿ ಹಾಗೂ ಏಕತೆಯ ಬಗ್ಗೆ ಮಾತನಾಡುವವರನ್ನು ನಾನು ಯಾವತ್ತೂ ಬೆಂಬಲಿಸಿದ್ದೇನೆ'' ಎಂದು ಟ್ವೀಟ್ ಮಾಡಿದ್ದಾರೆ.

“ಪೊಲೀಸ್ ಕಸ್ಟಡಿಯಲ್ಲಿ ಹಿಂಸೆಗೊಳಗಾದವರು ಪ್ರಜ್ಞಾ ಠಾಕುರ್ ಒಬ್ಬರೇ ಅಲ್ಲ'' ಎಂದ ಮಹಾಜನ್, ಇಂದೋರ್ ನಗರದಿಂದ ನವೆಂಬರ್ 2008ರಲ್ಲಿ ವಿಚಾರಣೆಗಾಗಿ ಮಹಾರಾಷ್ಟ್ರ ಎಟಿಎಸ್ ನಿಂದ ವಶಕ್ಕೆ ಪಡೆಯಲಾಗಿದ್ದ ದಿಲೀಪ್ ಪಟಿದಾರ್   ಉದಾಹರಣೆಯನ್ನೂ ನೀಡಿದರು. “ಪಟಿದಾರ್ ಹಿಂದಿರುಗಲೇ ಇಲ್ಲ, ಅವರ ನಾಪತ್ತೆ ವಿಚಾರವನ್ನು ಲೋಕಸಭೆಯಲ್ಲಿ ಹಾಗೂ ನ್ಯಾಯಾಲಯಗಳಲ್ಲೂ ಎತ್ತಲಾಗಿತ್ತು. ಆತನನ್ನು ಕಸ್ಟಡಿಯಲ್ಲಿ ಕೊಲ್ಲಲಾಗಿದೆ. ಇದು ಸತ್ಯ, ಯಾರಾದರೂ ಉತ್ತರಗಳನ್ನು ನೀಡಲೇಬೇಕು'' ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News