×
Ad

ಗೌತಮ್ ಗಂಭೀರ್ ವ್ಯಕ್ತಿತ್ವವೇ ಇಲ್ಲದ ಜಗಳಗಂಟ

Update: 2019-05-03 23:33 IST

ಇಸ್ಲಾಮಾಬಾದ್, ಮೇ 3: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಇತ್ತೀಚೆಗೆ ಬಿಡುಗಡೆಗೊಳಿಸಿರುವ ಆತ್ಮಚರಿತ್ರೆ ‘ಗೇಮ್ ಚೇಂಜರ್’ ಪುಸ್ತಕದಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಗೌತಮ್ ಗಂಭೀರ್ ಬಗ್ಗೆ ತೀವ್ರ ಟೀಕಾಪ್ರಹಾರ ನಡೆಸಿದ್ದು, ಗಂಭೀರ್ ವ್ಯಕ್ತಿತ್ವವೇ ಇಲ್ಲದ ಜಗಳಗಂಟ ಎಂದು ಹೇಳಿದ್ದಾರೆ. ಕೆಲವು ಪೈಪೋಟಿಗಳು ವೈಯಕ್ತಿಕವಾಗಿರುತ್ತವೆ ಮತ್ತು ಕೆಲವು ವೃತ್ತಿಪರವಾಗಿರುತ್ತವೆ. ಗೌತಮ್ ವರ್ತನೆಯೇ ಸರಿಯಿಲ್ಲ.

ಆತನಿಗೆ ವ್ಯಕ್ತಿತ್ವವೇ ಇಲ್ಲ. ಕ್ರಿಕೆಟ್ ಎಂಬ ಮಹಾನ್ ವ್ಯವಸ್ಥೆಯಲ್ಲಿ ಆತ ಕೇವಲ ಒಂದು ಪಾತ್ರ ಮಾತ್ರ. ಆತನ ಹೆಸರಲ್ಲಿ ಯಾವುದೇ ಮಹಾನ್ ದಾಖಲೆಗಳಿಲ್ಲ. ಆದರೆ ಆತ ಮಹಾ ಜಗಳಗಂಟ. ತಾನು ಡಾನ್ ಬ್ರಾಡ್ಮನ್ ಮತ್ತು ಜೇಮ್ಸ್ ಬಾಂಡ್ ಅವರ ಮಿಶ್ರಣ ಎಂಬ ರೀತಿ ಆತ ವರ್ತಿಸುತ್ತಾನೆ ಎಂದು ಅಫ್ರಿದಿ ಟೀಕಿಸಿದ್ದಾರೆ. ಖುಷಿಯಾಗಿರುವ, ಸಕಾರಾತ್ಮಕವಾಗಿ ಯೋಚಿಸುವ ಜನರನ್ನು ನಾನು ಇಷ್ಟಪಡುತ್ತೇನೆ. ಅವರು ಆಕ್ರಮಣಕಾರಿ ಅಥವಾ ಸ್ಫರ್ಧಾತ್ಮಕ ಮನೋಭಾವ ಹೊಂದಿರಲಿ ಅದರಿಂದ ಯಾವುದೇ ಸಮಸ್ಯೆಯಿಲ್ಲ. ಆದರೆ ನಿಮ್ಮಲ್ಲಿ ಸಕಾರಾತ್ಮಕ ಮನೋಭಾವ ಇರಬೇಕು. ಆದರೆ ಗಂಭೀರ್ ಇದನ್ನು ಹೊಂದಿಲ್ಲ ಎಂದವರು ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ. 2007ರಲ್ಲಿ ಕಾನ್ಪುರದಲ್ಲಿ ಭಾರತ- ಪಾಕ್ ಮಧ್ಯೆ ನಡೆದ ಏಕದಿನ ಪಂದ್ಯದಲ್ಲಿ ಅಫ್ರಿದಿ ಹಾಗೂ ಗಂಭೀರ್ ಮಧ್ಯೆ ತಿಕ್ಕಾಟ ನಡೆದಿತ್ತು. ಇಬ್ಬರ ಮೇಲೂ ಐಸಿಸಿ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪ ದಾಖಲಾಗಿತ್ತು. ಈ ಘಟನೆಯನ್ನು ಸ್ಮರಿಸಿಕೊಂಡಿರುವ ಅಫ್ರಿದಿ ಹೀಗೆ ಹೇಳುತ್ತಾರೆ:

2007ರಲ್ಲಿ ನಡೆದ ಏಶ್ಯಾ ಕಪ್ ಟೂರ್ನಿಯ ಪಂದ್ಯವದು. ನನ್ನ ಬೌಲಿಂಗ್‌ನಲ್ಲಿ ಒಂದು ರನ್ ಗಳಿಸಿದ ಆತ ನನ್ನತ್ತಲೇ ನುಗ್ಗಿ ಬಂದ. ಆಗ ಅಂಪೈರ್ ಅಥವಾ ನಾನು ಈ ಘಟನೆಗೆ ಮುಕ್ತಾಯ ಹೇಳಬೇಕಿತ್ತು. ಆಗ ನಾವಿಬ್ಬರೂ ನೇರವಾಗಿ ನಮ್ಮಿಬ್ಬರ ಗರ್ಲ್‌ಫ್ರೆಂಡ್‌ಗಳ ಬಗ್ಗೆ ಮಾತನ್ನು ವಿನಿಮಯ ಮಾಡಿಕೊಂಡಿದ್ದೆವು ಎಂದು ಹೇಳಿದ್ದಾರೆ. ಇದೇ ಕೃತಿಯಲ್ಲಿ ಅಫ್ರಿದಿ ತಮ್ಮ ನೈಜ ವಯಸ್ಸನ್ನೂ ಬಹಿರಂಗಪಡಿಸಿದ್ದಾರೆ. ಕ್ರಿಕೆಟ್‌ನ ದಾಖಲೆಗಳಲ್ಲಿ ಅಫ್ರಿದಿ 1980ರಲ್ಲಿ ಜನಿಸಿರುವುದಾಗಿ ದಾಖಲಾಗಿದೆ. ಆದರೆ ತಾನು ಹುಟ್ಟಿದ್ದು 1975ರಲ್ಲಿ. ಅಧಿಕಾರಿಗಳು ತನ್ನ ವಯಸ್ಸನ್ನು ತಪ್ಪಾಗಿ ನಮೂದಿಸಿದ್ದರು ಎಂದು ಅಫ್ರಿದಿ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News