ಇವರೇಕೆ ಹೀಗೆ?

Update: 2019-05-03 18:12 GMT

ಮಾನ್ಯರೇ,

ಭೈರಪ್ಪನವರ ಮಾತು ಏನೆಂದರೆ- ಧರ್ಮಶಾಸ್ತ್ರವೇ ನಮ್ಮ ಸಂವಿಧಾನವಂತೆ. ಅವರ ವಿಕೃತ ಮನಸ್ಸಿನ ಅಭಿವ್ಯಕ್ತಿ ಇದೇ ಮೊದಲೇನಲ್ಲ. ಅವರ ಕವಲು, ಮಂದ್ರ ಇತರ ಕೃತಿಗಳಲ್ಲಿ ಸಂಸ್ಕೃತಿಯ ಹೆಸರಿನಲ್ಲಿ ಅವರು ಮಾಡುವ ಮಾನಸಿಕ ಹಾದರವನ್ನು ಏನನ್ನೋಣ. ‘‘ಇನ್ನು ಮುಂದೆ ಹೆಂಡತಿಯನ್ನು ಮುಟ್ಟುವುದಕ್ಕೆ ಮುಂಚೆ ರಿಜಿಸ್ಟರ್‌ನಲ್ಲಿ ಬರೆದು ಸಹಿ ಮಾಡಿಸಿಕೊಳ್ಳಬೇಕಾಗುತ್ತದೆ’’ ಎಂದು ನುಡಿದಿದ್ದಾರೆ. ದಿನಾಂಕ 28-04-2019ರಂದು ರವಿವಾರ ಬೆಂಗಳೂರಿನ ಮಿಥಿಕ್ ಸೊಸೈಟಿಯ ಶತಮಾನೋತ್ಸವ ಸಭಾಂಗಣದಲ್ಲಿ ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನದಿಂದ ಹೊರತಂದಿರುವ ಸುಮತೀಂದ್ರ ನಾಡಿಗ ಅವರ ಕೊನೆಯ ಕೃತಿ ‘ಶ್ರೀವತ್ಸ ಸ್ಮತಿ’ ಯನ್ನು ಲೋಕಾರ್ಪಣೆ ಸಂದರ್ಭದಲ್ಲಿ ಇಂತಹ ಮಾತುಗಳನ್ನಾಡಿರುವುದು ಖೇದಕರ. ಅನುಮತಿ ಇಲ್ಲದೆ ಪತ್ನಿಯೊಂದಿಗೆ ಸಂಪರ್ಕ ಬೆಳೆಸುವುದನ್ನು ಅತ್ಯಾಚಾರವೆಂದು ಪರಿಗಣಿಸಬೇಕೆಂದು ಕಾನೂನು ಮಾಡಿರುವುದನ್ನು ಈ ಸಾಹಿತಿಯ ಕೊಳಕು ಮನಸ್ಸು ಹೀಗೆ ವ್ಯಂಗ್ಯವಾಡಿದೆ. ಪ್ರಾಯ ಸರಿದಂತೆ ಮತಿಭ್ರಮಣೆಯಾಗುತ್ತಿದೆಯೇ ಭೈರಪ್ಪರಿಗೆ ಅಥವಾ ಹಾಲಿ ಕೇಂದ್ರದಲ್ಲಿರುವ ಮನುವಾದಿಗಳನ್ನು ಓಲೈಸಿ ಯಾವುದಾದರೂ ಪ್ರಶಸ್ತಿ ಪಡೆಯಬೇಕಾಗಿದೆಯೇ ಇವರಿಗೆ?. ಶಬರಿಮಲೆ ದೇಗುಲ ಪ್ರವೇಶವನ್ನು ಸುಪ್ರೀಂ ಕೋರ್ಟ್ ಸಂವಿಧಾನದಡಿಯಲ್ಲಿ ಕೊಡಮಾಡಿರುವದನ್ನು ಹಿಂದೂ ಧರ್ಮದ ವಿರೋಧಿ ನಡೆ ಎಂದು ಹೇಳುವ ಭೈರಪ್ಪ ಸಂವಿಧಾನ ವಿರೋಧಿಯಾಗಿದ್ದಾರೆ. ಇದು ನ್ಯಾಯಾಂಗದ ನಿಂದನೆಯಲ್ಲವೇ? ಸನಾತನ ಕೊಚ್ಚೆಯಲ್ಲಿ ಮುಳುಗೇಳುತ್ತಿರುವ ಭೈರಪ್ಪಆರೆಸ್ಸೆಸ್‌ನ ಅಜೆಂಡಾ ಜಾರಿಗೆ ತರುವ ವಾಹಕವಾಗಿ ನಡೆದುಕೊಳ್ಳುತ್ತಿರುವುದು ಖೇದಕರ. ಯಾಕೆ ಇವರಿಗೆ ಮಹಿಳೆಯನ್ನು ಹೀನವಾಗಿ ಕಾಣುವ ಕೆಟ್ಟ ಬುದ್ಧಿಯೋ?. ಮೌಢ್ಯದ ವಿರೋಧಿ ನಡೆಯನ್ನು ಧರ್ಮ ವಿರೋಧಿ ನಡೆಯೆಂದು ಹೇಳುವುದು ತಪ್ಪಲ್ಲವೇ? ಶಬರಿಮಲೆ ಬಗ್ಗೆ ಮಾತನಾಡುವ ಭೈರಪ್ಪರಿಗೆ ತಾನು ಹುಟ್ಟಿದ್ದು ಹೇಗೆ ಎಂಬ ಅರಿವಿಲ್ಲವೇ? ಅವರ ತಾಯಿಯ ಮುಟ್ಟಿನ ರಕ್ತವೇ ನಿಂತು ತಾನು ಹುಟ್ಟಿರುವೆನೆಂಬ ಅರಿವು ಆತನಿಗಿಲ್ಲವೇ? ಹೆತ್ತ ತಾಯಿಯನ್ನೇ ಅವಮಾನಿಸುವ ಇವರಿಂದ ಮಹಿಳೆಯರು ಘನತೆಯನ್ನು, ಗೌರವವನ್ನು ನಿರೀಕ್ಷಿಸುವುದು ಸಾಧ್ಯವೇ? ಎಲ್ಲರೂ ಬದುಕಿನಲ್ಲಿ ತನ್ನ ಸಂಗಾತಿಯ ಮನಸ್ಸನ್ನರಿತು ಘನತೆಯಿಂದ ನಡೆಯಬೇಕಾಗುತ್ತದೆ. ಅದು ಹೆಣ್ಣೇ ಆಗಲಿ, ಗಂಡೇ ಆಗಲಿ. ಅವರನ್ನು ಗೌರವಿಸ ಬೇಕಾಗುತ್ತದೆ. ಈ ವಯಸ್ಸಿನಲ್ಲಿ ಇವರು ಇನ್ನೂ ಮಾಗಲಿಲ್ಲವಲ್ಲ?. ಹೆಂಡತಿಯ ಅನುಮತಿಯಿಲ್ಲದೆ ಅವಳನ್ನು ಮುಟ್ಟಬಾರದು ಎಂಬ ಸಾಮಾನ್ಯ ಮಾತು ಕೂಡಾ ಇವರಿಗೆ ಅರ್ಥವಾಗದಿರುವುದು ಶೋಚನೀಯ. ಮತ್ತೆ ಮತ್ತೆ ಅವರು ಇಂತಹದ್ದೇ ಯಡವಟ್ಟುಗಳನ್ನು ಮಾಡುತ್ತಿರುವುದು ವಿಷಾದನೀಯ. ಅವರು ಧರ್ಮದ ಮೌಢ್ಯವನ್ನೇ ಯಾವತ್ತೂ ಎತ್ತಿಹಿಡಿಯುತ್ತಾರೆ. ಅದೇ ಅವರ ವ್ಯಕ್ತಿತ್ವ. ದಲಿತರನ್ನು ಮನುಷ್ಯರಾಗಿ ಕಾಣದ ಮನುಧರ್ಮವನ್ನು ಎತ್ತಿ ಹಿಡಿಯುತ್ತಿರುವ ಭೈರಪ್ಪರ ಮನಃಸ್ಥಿತಿಯ ಬಗ್ಗೆ ಆರ್ಥವಾಗಬೇಕು. ದಲಿತ, ಸ್ತ್ರೀಯರು, ದಮನಿತರಿಗೆ ನಮ್ಮ ಸಂವಿಧಾನ ಮೂಲಭೂತ ಹಕ್ಕುಗಳನ್ನು ನೀಡಿದೆ. ಸಂವಿಧಾನದ ಪ್ರಸ್ತಾವನೆಯಲ್ಲಿ ಹೇಳಿದಂತೆ ‘‘ಭಾರತೀಯ ಪ್ರಜೆಗಳಾದ ನಾವು’’ ಎಂಬ ಒಂದೇ ವಾಕ್ಯದಲ್ಲಿ ಭಾರತದ ಎಲ್ಲ ಜಾತಿ, ಧರ್ಮ, ಪ್ರಾಂತ, ಲಿಂಗಭೇದಗಳನ್ನು ಅಳಿಸಿ ಹಾಕಿ ಮಹಿಳೆಯೂ ನಾಗರಿಕಳು ಮತ್ತು ದೇಶದ ಪ್ರಜೆ ಎಂದು ಪರಿಭಾವಿಸಿದೆ. ನಿಮ್ಮ ಮನುಧರ್ಮ ಅವಳನ್ನು ಸತಿಯಾಗಿಸಿ ಸುಟ್ಟು ಹಾಕಿದರೆ ಸಂವಿಧಾನ ಅವಳನ್ನು ಪ್ರಧಾನಿಯನ್ನಾಗಿ ಮಾಡಿದೆ. ಅವಳನ್ನು ರಾಷ್ಟ್ರಪತಿಯನ್ನಾಗಿ ಮಾಡಿದೆ. ರಾಜಕಾರಣಿ, ವಿಜ್ಞಾನಿಯನ್ನಾಗಿಸಿದೆ.
ಹೆಂಡತಿ ಗಂಡನ ಆಸ್ತಿಯಲ್ಲ. ಅದೇ ರೀತಿ ಗಂಡ ಹೆಂಡತಿಯ ಆಸ್ತಿಯಲ್ಲ ಎಂಬ ಸಾಮಾನ್ಯ ಜ್ಞಾನವೂ ಈ ಹಿರಿಯ ಸಾಹಿತಿಗೆ ಇರಬೇಡವೇ? ಪುರುಷ ಪ್ರಾಧಾನ್ಯ ಮೌಲ್ಯಗಳನ್ನು ಇನ್ನೆಷ್ಟು ದಿನ ಇವರು ಎತ್ತಿ ಹಿಡಿಯುತ್ತಾರೆ? ಹೆಣ್ಣೆಂದರೆ ಅವರ ಸಂಗಾತಿ, ಅವರ ಒಡನಾಡಿ ಎಂಬ ಅರಿವು ಇವರಿಗೆ ಯಾವಾಗ ಬರುತ್ತದೆ? ಸಮಾನತೆಯ ನಡೆಯಿಂದ, ಲಿಂಗ ತಾರತಮ್ಯ ಅಳಿಸುವುದರಿಂದಲೇ ರಾಷ್ಟ್ರದ ಪ್ರಗತಿ ಸಾಧ್ಯ. ಇಂತಹ ಸನಾತನ ಮನಸ್ಸುಗಳು ಎಂದಿಗೂ ಪ್ರಗತಿಗೆ ಮಾರಕವಾಗಿವೆ. ಈ ಸನಾತನಿಯ ಮನದಾಳದ ವಿಕೃತಿ ಈ ರೀತಿ ಕಾರುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ವಿಶ್ವದ ಶ್ರೇಷ್ಠ ಸಂವಿಧಾನವಾದ ನಮ್ಮ ಸಂವಿಧಾನವೇ ನಮ್ಮ ಹೆಮ್ಮೆ.

Writer - -ಡಾ. ಕೆ. ಷರೀಫಾ, ಬೆಂಗಳೂರು

contributor

Editor - -ಡಾ. ಕೆ. ಷರೀಫಾ, ಬೆಂಗಳೂರು

contributor

Similar News