×
Ad

ಶುಭಮನ್ ಸೊಗಸಾದ ಆಟ: ಕೋಲ್ಕತಾಕ್ಕೆ ಗೆಲುವು

Update: 2019-05-03 23:59 IST

ಚಂಡಿಗಡ, ಮೇ 3: ಆರಂಭಿಕ ಆಟಗಾರ ಶುಭಮನ್ ಗಿಲ್ ಸೊಗಸಾದ ಬ್ಯಾಟಿಂಗ್ ನೆರವಿನಿಂದ ಕೋಲ್ಕತಾ ನೈಟ್ ರೈಡರ್ಸ್ ತಂಡ ಆತಿಥೇಯ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ 52ನೇ ಐಪಿಎಲ್ ಪಂದ್ಯವನ್ನು 7 ವಿಕೆಟ್‌ಗಳಿಂದ ಗೆದ್ದುಕೊಂಡಿದೆ. ಶುಕ್ರವಾರ ಟಾಸ್ ಸೋತು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಪಂಜಾಬ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 183 ರನ್ ಗಳಿಸಿತು. ಕರನ್ ಏಕಾಂಗಿ ಹೋರಾಟ ನೀಡಿ ತಂಡ ಉತ್ತಮ ಮೊತ್ತ ಕಲೆ ಹಾಕಲು ನೆರವಾದರು. ಗೆಲ್ಲಲು ಕಠಿಣ ಗುರಿ ಪಡೆದ ಕೋಲ್ಕತಾ 18 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 185 ರನ್ ಗಳಿಸಿತು. ಕ್ರಿಸ್ ಲಿನ್(46)ರೊಂದಿಗೆ ಇನಿಂಗ್ಸ್ ಆರಂಭಿಸಿದ ಗಿಲ್(ಔಟಾಗದೆ 65, 49 ಎಸೆತ, 5 ಬೌಂಡರಿ, 2 ಸಿಕ್ಸರ್)ಮೊದಲ ವಿಕೆಟ್‌ಗೆ 62 ರನ್ ಗಳಿಸಿ ಉತ್ತಮ ಆರಂಭ ಒದಗಿಸಿದರು.

ಲಿನ್ ಔಟಾದ ಬಳಿಕ ಉತ್ತಪ್ಪ(22)ರೊಂದಿಗೆ 2ನೇ ವಿಕೆಟ್‌ಗೆ 38 ರನ್ ಸೇರಿಸಿದ ಗಿಲ್ ತನ್ನ ಹೋರಾಟ ಮುಂದುವರಿಸಿದರು. ಉತ್ತಪ್ಪ ನಿರ್ಗಮನದ ಬಳಿಕ ರಸೆಲ್(24)ರೊಂದಿಗೆ 3ನೇ ವಿಕೆಟ್‌ಗೆ 50 ರನ್ ಹಾಗೂ ನಾಯಕ ದಿನೇಶ್ ಕಾರ್ತಿಕ್(ಔಟಾಗದೆ 21)ಅವರೊಂದಿಗೆ 4ನೇ ವಿಕೆಟ್‌ಗೆ 35 ರನ್ ಸೇರಿಸಿ ಇನ್ನೂ 12 ಎಸೆತಗಳ ಬಾಕಿ ಇರುವಾಗಲೇ ಕೋಲ್ಕತಾವನ್ನು ಗೆಲುವಿನ ದಡ ಸೇರಿಸಿದರು. ಇದಕ್ಕೂ ಮೊದಲು ಔಟಾಗದೆ 55 ರನ್(24 ಎಸೆತ, 7 ಬೌಂಡರಿ,2 ಸಿಕ್ಸರ್)ಗಳಿಸಿದ ಸ್ಯಾಮ್ ಕರನ್ ಸಹಾಯದಿಂದ ಪಂಜಾಬ್ 6 ವಿಕೆಟ್‌ಗೆ 183 ರನ್ ಗಳಿಸಿತು. 5ನೇ ವಿಕೆಟ್‌ಗೆ ಮನ್‌ದೀಪ್ ಸಿಂಗ್(25)ರೊಂದಿಗೆ 38 ರನ್ ಸೇರಿಸಿದ ಕರನ್ 7ನೇ ವಿಕೆಟ್‌ಗೆ ಆ್ಯಂಡ್ರೂ ಟೈ ಜೊತೆಗೂಡಿ ಮುರಿಯದ ಜೊತೆಯಾಟದಲ್ಲಿ 32 ರನ್ ಗಳಿಸಿ ತಂಡದ ಮೊತ್ತ ಹಿಗ್ಗಿಸಿದರು.

ಇನಿಂಗ್ಸ್ ಆರಂಭಿಸಿದ ಕ್ರಿಸ್ ಗೇಲ್(14)ಹಾಗೂ ಕೆ.ಎಲ್. ರಾಹುಲ್(02)ತಂಡಕ್ಕೆ ಉತ್ತಮ ಆರಂಭ ಒದಗಿಸಲು ವಿಫಲರಾದರು. ಕಳೆದ ಪಂದ್ಯದಲ್ಲಿ ಮಿಂಚಿದ್ದ ರಾಹುಲ್ 3ನೇ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದರು. ಗೇಲ್ ಎಸೆತಕ್ಕೊಂದು ರನ್ ( 14) ರನ್ ಗಳಿಸಿ ಸಂದೀಪ್ ವಾರಿಯರ್‌ಗೆ ಬಲಿಯಾದರು. ಆಗ ಪಂಜಾಬ್ ಸ್ಕೋರ್ 22ಕ್ಕೆ 2. ಮೂರನೇ ವಿಕೆಟ್‌ಗೆ 69 ರನ್ ಕಲೆ ಹಾಕಿದ ಪೂರನ್(48, 27 ಎಸೆತ, 3 ಬೌಂಡರಿ, 4 ಸಿಕ್ಸರ್) ಹಾಗೂ ಮಾಯಾಂಕ್(36, 26 ಎಸೆತ, 2 ಬೌಂಡರಿ, 1 ಸಿಕ್ಸರ್)ತಂಡಕ್ಕೆ ಆಸರೆಯಾದರು. ಅರ್ಧಶತಕದ ಅಂಚಿನಲ್ಲಿದ್ದ ಪೂರನ್‌ಗೆ ನಿತೀಶ್ ರಾಣಾ ಪೆವಿಲಿಯನ್ ಹಾದಿ ತೋರಿಸಿದರು. ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದ ಮಾಯಾಂಕ್ ರನೌಟಾಗಿ ನಿರಾಸೆಗೊಳಿಸಿದರು. ಕೋಲ್ಕತಾ ಪರ ಸಂದೀಪ್ ವಾರಿಯರ್(2-31)ಯಶಸ್ವಿ ಬೌಲರ್ ಎನಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News