ಸನ್‌ರೈಸರ್ಸ್‌ನ್ನು ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್: ಕ್ವಾಲಿಫೈಯರ್ -2ರಲ್ಲಿ ಚೆನ್ನೈ ಎದುರಾಳಿ
ವಿಶಾಖಪಟ್ಟಣ, ಮೇ 8: ಐಪಿಎಲ್ ಟ್ವೆಂಟಿ-20 ಎಲಿಮಿನೇಟರ್ ಪಂದ್ಯದಲ್ಲಿ ಬುಧವಾರ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು 2 ವಿಕೆಟ್‌ಗಳ ಅಂತರದಿಂದ ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕ್ವಾಲಿಫೈಯರ್ -2ರಲ್ಲಿ ಆಡುವ ಅವಕಾಶ ಗಿಟ್ಟಿಸಿಕೊಂಡಿದೆ.
ಡಾ.ವೈ.ಎಸ್.ರಾಜಶೇಖರ್ ರೆಡ್ಡಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 163 ರನ್‌ಗಳ ಸವಾಲನ್ನು ಪಡೆದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೊನೆಯ ಹಂತದಲ್ಲಿ ಆತಂಕದ ಕ್ಷಣಗಳನ್ನು ಎದುರಿಸಿದರೂ ಅದರ ಗೆಲುವಿಗೆ ಅಡ್ಡಿಯಾಗಲಿಲ್ಲ. ಅದು ಇನ್ನೂ 1 ಎಸೆತ ಬಾಕಿ ಉಳಿಸಿ 8 ವಿಕೆಟ್ ನಷ್ಟದಲ್ಲಿ 165 ರನ್ ಗಳಿಸಿತು. ಆರಂಭಿಕ ದಾಂಡಿಗ ಪ್ರಥ್ವಿ ಶಾ 56 ರನ್ (38ಎ, 6ಬೌ,2ಸಿ) ಮತ್ತು ವಿಕೆಟ್ ಕೀಪರ್ ರಿಷಭ್ ಪಂತ್ 49 ರನ್ (21ಎ, 2ಬೌ,5ಸಿ) ಗಳಿಸಿ ತಂಡದ ಗೆಲುವಿಗೆ ದೊಡ್ಡ ಕೊಡುಗೆ ನೀಡಿದರು.
ಡೆಲ್ಲಿ ಕ್ಯಾಪಿಟಲ್ಸ್ ತಂಡ ವಿಶಾಖಪಟ್ಟಣದಲ್ಲಿ ಶುಕ್ರವಾರ ನಡೆಯಲಿರುವ ಕ್ವಾಲಿಫೈಯರ್-2ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಸನ್‌ರೈಸರ್ಸ್ ತಂಡದ ಬ್ಯಾಟಿಂಗ್ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 162 ರನ್ ಕಲೆ ಹಾಕಿತ್ತು.