ರಾಜೀವ್‌ ಗಾಂಧಿ ವಿರುದ್ಧದ ಯುದ್ಧನೌಕೆಯಲ್ಲಿ ವಿಹಾರ ಆರೋಪಕ್ಕೆ ಮೋದಿಯನ್ನು ರಮ್ಯಾ ಕುಟುಕಿದ್ದು ಹೀಗೆ...

Update: 2019-05-10 03:45 GMT

ಹೊಸದಿಲ್ಲಿ, ಮೇ 10: ಭಾರತದ ಯುದ್ಧನೌಕೆಯಲ್ಲಿ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಕುಟುಂಬದ ಜತೆ ವಿಹಾರಯಾನ ಕೈಗೊಂಡಿದ್ದರು ಎಂಬ ಆರೋಪಕ್ಕೆ ತಿರುಗೇಟು ನೀಡಲು ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ದಿವ್ಯಸ್ಪಂದನಾ(ನಟಿ, ಮಾಜಿ ಸಂಸದೆ ರಮ್ಯಾ), ಐಎನ್‌ಎಸ್ ಸುಮಿತ್ರಾದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಪ್ರಯಾಣಿಸುತ್ತಿರುವ ಫೋಟೊ ಪೋಸ್ಟ್ ಮಾಡಿದ್ದಾರೆ. ''ಐಎನ್‌ಎಸ್ ಸುಮಿತ್ರಾದಲ್ಲಿ ಕೆನಡಾ ಪ್ರಜೆ ಪ್ರಯಾಣಿಸಬಹುದೇ'' ಎಂದು ಮೋದಿಯನ್ನು ಕುಟುಕಿದ್ದಾರೆ.

ಪ್ರಧಾನಿ ಮೋದಿ, ನೀವು ಕೆನಡಾ ಪ್ರಜೆ ಅಕ್ಷಯ್ ಕುಮಾರ್ ಅವರನ್ನು ಐಎನ್‌ಎಸ್ ಸುಮಿತ್ರಾದಲ್ಲಿ ಜತೆಗೆ ಕರೆದೊಯ್ದಿದ್ದೀರಿ ಎಂದು ಟ್ವೀಟ್ ಮಾಡಿರುವ ಅವರು, ಇದನ್ನು ಪ್ರಧಾನಿ ಹಾಗೂ ಅಕ್ಷಯ್ ಕುಮಾರ್‌ಗೆ ಟ್ಯಾಗ್ ಮಾಡಿದ್ದಾರೆ.

"ಬಹುತೇಕ ನಾವು ಯಾರೂ ಈ ವಿವಾದವನ್ನು ಮರೆತಿಲ್ಲ" ಎಂದು 2016ರಲ್ಲಿ ನಡೆದ ಘಟನೆಯನ್ನು ಟೀಕಿಸಿದ ಲೇಖನವನ್ನು ಉಲ್ಲೇಖಿಸಿದ್ದಾರೆ.

ಬುಧವಾರ ದಿಲ್ಲಿಯಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಮೋದಿ, "ರಾಹುಲ್‌ ಗಾಂಧಿಯವರ ತಂದೆ, ಮಾಜಿ ಪ್ರಧಾನಿ ರಾಜೀವ್‌ ಗಾಂದಿಯವರು ಐಎನ್‌ಎಸ್ ವಿರಾಟ್ ಯುದ್ಧನೌಕೆಯನ್ನು 1987ರಲ್ಲಿ ವೈಯಕ್ತಿಕ ಟ್ಯಾಕ್ಸಿಯಾಗಿ ಕುಟುಂಬದ ಜತೆ ವಿಹಾರಕ್ಕೆ ಬಳಸಿದ್ದರು" ಎಂದು ಆಪಾದಿಸಿದ್ದರು.

ರಾಜೀವ್‌ ಗಾಂಧಿ ತಮ್ಮ ಸ್ನೇಹಿತರು ಹಾಗೂ ಇಟಲಿಯ ಅತ್ತೆ ಜತೆಗೆ ಯುದ್ಧನೌಕೆಯನ್ನು ಏರಿದ್ದರು ಎಂದು ಹೇಳಿ ಈ ಬಗೆಗಿನ ಟ್ವೀಟ್‌ನಲ್ಲಿ 1988ರ ಇಂಡಿಯಾ ಟುಡೇ ವರದಿಯನ್ನು ಬಳಸಿದ್ದರು.

ಇದನ್ನು ಬಲವಾಗಿ ಅಲ್ಲಗಳೆದ ಕಾಂಗ್ರೆಸ್, ನಿವೃತ್ತ ವೈಸ್ ಅಡ್ಮಿರಲ್ ವಿನೋದ್ ಪರ್ಸೀಚಾ ಅವರ ಹೇಳಿಕೆಯನ್ನು ಉಲ್ಲೇಖಿಸಿತ್ತು. ರಾಜೀವ್‌ ಗಾಂಧಿ ಅಧಿಕೃತ ಭೇಟಿಗಾಗಿ ಐಎನ್‌ಎಸ್ ವಿರಾಟ್‌ನಲ್ಲಿ ಯಾನ ಕೈಗೊಂಡಿದ್ದರೇ ವಿನಃ ವಿಹಾರಕ್ಕಾಗಿ ಅಲ್ಲ ಎಂದು ಅವರು ಸ್ಪಷ್ಟಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News