ಫನಿ ಚಂಡಮಾರುತದ ಪರಿಣಾಮ ಭುವನೇಶ್ವರದಲ್ಲಿ 1 ಮಿಲಿಯನ್‌ಗೂ ಅಧಿಕ ಮರಗಳು ಧರೆಗೆ

Update: 2019-05-10 17:19 GMT

ಭುವನೇಶ್ವರ, ಮೇ 10: ಕಳೆದ ವಾರ ಒಡಿಶಾಕ್ಕೆ ಅಪ್ಪಳಿಸಿದ ಫನಿ ಚಂಡಮಾರುತದಿಂದ ಭುವನೇಶ್ವರದಲ್ಲಿ 1 ಮಿಲಿಯನ್‌ಗೂ ಅಧಿಕ ಮರಗಳು ಧರೆಗುರುಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೇ 3ರಂದು ಅಪ್ಪಳಿಸಿದ ತೀವ್ರ ಸ್ವರೂಪದ ಚಂಡಮಾರುತದಿಂದಾಗಿ ಹೆಚ್ಚಿನ ಸಾವುನೋವು ಸಂಭವಿಸಿಲ್ಲ. ಆದರೆ ಪರಿಸರದ ಮೇಲಾಗಿರುವ ಹಾನಿ ಮಾತ್ರ ಗಂಭೀರವಾಗಿದ್ದು ಚೇತರಿಸಿಕೊಳ್ಳಲು ಒಂದು ದಶಕಗಳೇ ಬೇಕಾಗಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಚಂಡಮಾರುತದಿಂದ ಕರಾವಳಿ ನಗರ ಪುರಿಯಲ್ಲಿ ಹೆಚ್ಚಿನ ಹಾನಿಯಾಗಿದ್ದು, ರಾಜ್ಯದಲ್ಲಿ ಒಟ್ಟು 29 ಮಂದಿ ಸಾವನ್ನಪ್ಪಿದ್ದಾರೆ. ಭುವನೇಶ್ವರದಲ್ಲಿ 1 ಮಿಲಿಯನ್‌ಗೂ ಹೆಚ್ಚು ಮರಗಳು ಬುಡಮೇಲಾಗಿ ಉರುಳಿಬಿದ್ದಿವೆ.

 ಅಲ್ಲದೆ ಬಹುತೇಕ ವಿದ್ಯುತ್ ಕಂಬಗಳು ತುಂಡಾಗಿ ಅಥವಾ ಉರುಳಿ ನೆಲಕ್ಕೆ ಬಿದ್ದಿದ್ದು ವಿದ್ಯುತ್ ಪೂರೈಕೆ ವ್ಯವಸ್ಥೆಯನ್ನು ಮರಳಿ ಸ್ಥಾಪಿಸಲು ಅಧಿಕಾರಿಗಳು ಹರಸಾಹಸ ಪಡಬೇಕಾಗಿದೆ. ಭುವನೇಶ್ವರದ ಜನತೆ ಮರಗಳನ್ನು ಪ್ರೀತಿಸುವವರು. ಕಳೆದ ಎರಡು ದಶಕಗಳಿಂದ ನೀರುಣಿಸಿ ಪೋಷಿಸಿದ್ದ ಮರಗಳು ಏಕಾಏಕಿ ನೆಲಕ್ಕುರುಳಿರುವುದನ್ನು ಕಂಡಾಗ ಸಂಕಟವಾಗುತ್ತದೆ. ಗಿಡಗಳನ್ನು ನಮ್ಮ ಮಕ್ಕಳ ರೀತಿಯಲ್ಲಿಯೇ ಪೋಷಿಸಿದ್ದೇವೆ ಎಂದು ಇಲ್ಲಿನ ನಿವಾಸಿಗಳು ಹೇಳುತ್ತಾರೆ. ಪರಿಸರದ ಮೇಲಾಗಿರುವ ಹಾನಿಯನ್ನು ಈಗಲೇ ನಿರ್ಣಯಿಸಲು ಸಾಧ್ಯವಿಲ್ಲ. ಆದರೆ ಸಂಪೂರ್ಣ ಹಸಿರೀಕರಣ ನಾಶವಾಗಿದೆ. ಪತ್ರಪಾದ ಪರಿಸರದಲ್ಲೇ 1 ಲಕ್ಷ ಮರಗಳು ನಾಶವಾಗಿವೆ. ಕಳೆದ 4 ದಿನಗಳಲ್ಲಿ ನಮ್ಮ 40 ಸದಸ್ಯರ ತಂಡವು 800 ಮರಗಳಿಗೆ ಮತ್ತೆ ನೆಲೆ ನೀಡಿದ್ದೇವೆ ಎಂದು ವಿಭಾಗೀಯ ಅರಣ್ಯಾಧಿಕಾರಿ ಅಶೋಕ್ ಮಿಶ್ರ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News