ದಿನ ಪತ್ರಿಕೆಗಳು ಪತ್ರಿಕಾ ಧರ್ಮವನ್ನು ಪಾಲಿಸಲಿ

Update: 2019-05-12 18:02 GMT

ಮಾನ್ಯರೇ,
  ಇತ್ತೀಚೆಗೆ ಬೆಂಗಳೂರು ನಗರದ ಮೆಟ್ರೊ ಪ್ರಯಾಣ ಬಯಸಿದ್ದ ನಿರ್ವಸಿತನನ್ನು ಶಂಕಿಸಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಸಂಗತಿ ಪತ್ರಿಕೆಗಳೆಲ್ಲ ಭಾರೀ ಸುದ್ದಿ ಮಾಡಿತು. ತನಿಖೆ ನಡೆಸಿದ ನಂತರ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಅನುಮಾನಾಸ್ಪದ ಓಡಾಟ ನಡೆಸಿದ ಹಿನ್ನೆಲೆಯಲ್ಲಿ ಸಾಜಿದ್ ಖಾನ್ ಎಂಬವರನ್ನು ವಶಕ್ಕೆ ಪಡೆಯಲಾಗಿದ್ದು ಅವರ ಬಳಿ 5 ರೂ. ನಾಣ್ಯ ಹಾಗೂ ಕೈಗೆ ತಾಯತ ಕಟ್ಟಿಕೊಂಡಿದ್ದರಿಂದ ಮೆಲ್‌ಡಿಟೆಕ್ಸರ್‌ನಲ್ಲಿ ಶಬ್ದ ಬಂದಿದೆ. ಅವರಿಗೆ ಕನ್ನಡ ಬರುತ್ತಿರಲಿಲ್ಲ. ಭದ್ರತಾ ಸಿಬ್ಬಂದಿಗೆ ಕನ್ನಡ ಬಿಟ್ಟು ಬೇರೆ ಭಾಷೆ ಬರುತ್ತಿರಲಿಲ್ಲ. ಭಾಷೆಯ ಕಾರಣದಿಂದಾಗಿ ಈ ಗೊಂದಲ ನಿರ್ಮಾಣವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಆದರೆ ನಮ್ಮ ಮಾಧ್ಯಮಗಳು ಪೊಲೀಸರ ಹೇಳಿಕೆಯನ್ನು ತಮ್ಮ ಮುಖಪುಟಗಳಲ್ಲಿ ಪ್ರಕಟಿಸದೇ ಈ ಸುದ್ದಿಯಿಂದ ನುಣುಚಿಕೊಳ್ಳುತ್ತಿದೆ. ಆರೋಪಿಯನ್ನು ಭಯೋತ್ಪಾದಕನೆಂದು ಚಿತ್ರಿಸಿ ಮುಖ ಪುಟದಲ್ಲಿ ಆಸಕ್ತಿಯಿಂದ ಪ್ರಕಟಿಸಿದಂತೆ ನಂತರದ ಬೆಳವಣಿಗೆಗಳನ್ನು ಈ ಮಾಧ್ಯಮಗಳು ಬೇಕಂತಲೇ ಮರೆತು ಬಿಟ್ಟಂತೆ ನಟಿಸುತ್ತಿವೆ. ಈ ಹಿಂದೆ ಒಬ್ಬ ವ್ಯಕ್ತಿ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಡಲಾಗಿದೆ ಎಂದು ಕರೆ ಮಾಡಿ ಆತಂಕವನ್ನು ಸೃಷ್ಟಿಸಿದ್ದ. ಆತ ಒಂದು ನಿರ್ದಿಷ್ಟ ಧರ್ಮಕ್ಕೆ ಸೇರಿದವನಾಗಿದ್ದುದರಿಂದ ನಮ್ಮಲ್ಲಿ ಅನೇಕ ಮಾಧ್ಯಮದವರು ತಮ್ಮ ಪತ್ರಿಕೆಗಳ ಒಳಪುಟಗಳಲ್ಲಿ ಎಲ್ಲೊ ಒಂದು ಕಡೆ ಚಿಕ್ಕದಾದ ಸುದ್ದಿಯನ್ನು ಪ್ರಕಟಿಸಿ ಮೌನವಾಗಿದ್ದರು. ಈಗ ಮೆಟ್ರೊ ನಿಲ್ದಾಣದಲ್ಲಿಯ ಪ್ರಕರಣವನ್ನು ಬಹಳ ಆಸಕ್ತಿಯಿಂದ ತಮ್ಮ ಪತ್ರಿಕೆಗಳ ಮುಖಪುಟಗಳಲ್ಲಿ ನಾಮುಂದು ತಾಮುಂದು ಎಂಬಂತೆ ಪ್ರಕಟಿಸುತ್ತಿವೆ. ಎಲ್ಲಾ ಧರ್ಮದ ಅನುಯಾಯಿಗಳನ್ನು ಸಮಾನವಾಗಿ ಕಾಣುವುದನ್ನು ಬಿಟ್ಟು ಇಂದು ಮಾಧ್ಯಮಗಳು ಒಂದು ನಿರ್ದಿಷ್ಟ ಪಕ್ಷ ಹಾಗೂ ಧರ್ಮದ ಏಜಂಟರಂತೆ ವರ್ತಿಸುತ್ತಿರುವುದು ನಿಜಕ್ಕೂ ದುರಂತದ ಸಂಗತಿಯಾಗಿದೆ. ಇಂದು ಕನ್ನಡದ ಹೆಚ್ಚಿನ ದಿನ ಪತ್ರಿಕೆಗಳು ಪತ್ರಿಕಾ ಧರ್ಮವನ್ನು ಪಾಲಿಸುವಲ್ಲಿ ಸೋತಿವೆ ಎಂದರೆ ತಪ್ಪಾಗದು.
ರಿಯಾಝ್ ಅಹ್ಮದ್, ರೋಣ

Writer - ರಿಯಾಝ್ ಅಹ್ಮದ್, ರೋಣ

contributor

Editor - ರಿಯಾಝ್ ಅಹ್ಮದ್, ರೋಣ

contributor

Similar News