ದಲಿತ ಯುವಕನ ಮದುವೆ ಮೆರವಣಿಗೆಗೆ ಕಲ್ಲೆಸೆತ

Update: 2019-05-13 15:42 GMT
ಫೋಟೊ ಕೃಪೆ: indian express

ಅಹ್ಮದಾಬಾದ್,ಮೇ 13: ದಲಿತ ಮದುವಣಿಗನೊಬ್ಬನ ವಿವಾಹ ದ ಮೆರವಣಿಗೆಗೆ ಮೇಲ್ಜಾತಿಯ ಗ್ರಾಮಸ್ಥರು ಕಲ್ಲೆಸೆದ ಘಟನೆ ರವಿವಾರ ನಡೆದಿದೆ. ಘಟನೆಯ ಬೆನ್ನಲ್ಲೇ ಗಲಭೆ ನಿರತ ಗ್ರಾಮಸ್ಥರನ್ನು ಚದುರಿಸಲು ಪೊಲೀರು ಲಾಠಿಚಾರ್ಚ್ ನಡೆಸಿದರು.

ಖಂಬಿಸಾರ್ ಗ್ರಾಮದಲ್ಲಿ ರವಿವಾರ ಸಂಜೆ ವೇಳೆಗೆ ದಲಿತ ಮದುಮಗನ ವಿವಾಹ ಮೆರವಣಿಗೆ ಹೊರಡಲು ಸಿದ್ಧವಾದಾಗ ಅದನ್ನು ವಿರೋಧಿಸಿ ಮೇಲ್ಜಾತಿಯ ಮಹಿಳೆಯರ ಗುಂಪೊಂದು ಧರಣಿ ಕುಳಿತು ಭಜನೆಗಳನ್ನು ಹಾಡತೊಡಗಿತು. ಇದಕ್ಕೆ ಪ್ರತಿಯಾಗಿ ದಲಿತ ಮಹಿಳೆಯರು ಗರ್ಭಾ ನೃತ್ಯ ಮಾಡಲು ತೊಡಗಿದರು. ಆಗ ಉದ್ವಿಗ್ನತೆಯೇರ್ಪಟ್ಟು, ಉಭಯ ಸಮುದಾಯಗಳ ಸದಸ್ಯರು ಪರಸ್ಪರ ಕಲ್ಲೆಸೆತದಲ್ಲಿ ತೊಡಗಿದರು.

ವಿವಾಹತಂಡದ ಮೆರವಣಿಗೆಗೆ ಅವಕಾಶ ಮಾಡಿಕೊಡುವುದಕ್ಕಾಗಿ ಗ್ರಾಮದಲ್ಲಿ ಭಾರೀ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿತ್ತು. ಗಲಭೆಗಿಳಿದ ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಮೆರವಣಿಗೆ ಮುಂದೆ ಸಾಗಲು ಮದುಮಗನ ತಂಡವು ಸುಮಾರು ನಾಲ್ಕು ತಾಸುಗಳವರೆಗೂ ಕಾದು ನಿಂತಿತ್ತು ಎಂದು ಗಾಂಧಿನಗರ ವಲಯದ ಐಜಿ ಮಯೂರ್ ಚಾವ್ಡಾ ತಿಳಿಸಿದ್ದಾರೆ.

ಗಲಭೆಯ ಹಿನ್ನೆಲೆಯಲ್ಲಿ ಮದುವೆ ಮೆರವಣಿಗೆಯನ್ನು ನಡೆಸಲಾಗಿಲ್ಲ ಹಾಗೂ ಘಟನೆಯಲ್ಲಿ ಮದುಮಗ ಸೇರಿದಂತೆ ಕುಟುಂಬದ ಕೆಲವು ಸದಸ್ಯರಿಗೆ ಸಣ್ಣಪುಟ್ಟ ಗಾಯಗಳಾಗಿವೆಯೆಂದು ವರನ ತಂದೆ ದಯಾಭಾಯಿ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿ ಪೊಲೀಸರಿಗೆ ದೂರು ನೀಡುವುದಾಗಿಯೂ ಅವರು ಹೇಳಿದ್ದಾರೆ.

ಪ್ರತ್ಯೇಕ ಘಟನೆಯೊಂದರಲ್ಲಿ ಸಬರಕಾಂತ ಜಿಲ್ಲೆಯ ಸೀತವಾಡ ಗ್ರಾಮದಲ್ಲಿ ದಲಿತ ಮದುಮಗನೊಬ್ಬ ಸ್ಥಳೀಯ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸುವುದಕ್ಕೆ ಮೇಲ್ಜಾತಿಯ ಕೆಲವರು ವಿರೋಧ ವ್ಯಕ್ತಪಡಿಸಿದ ಬಳಿಕ ಮದುಮಗನ ಪೊಲೀಸರ ರಕ್ಷಣೆ ಕೋರಿದ್ದನು. ಆನಂತರ ಪೊಲೀಸರ ಬೆಂಗಾವಲಿನೊಂದಿಗೆ ಮದುವೆ ಮೆರವಣಿಗೆ ಶಾಂತಿಯುತವಾಗಿ ನಡೆಯಿತೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News