ಬಿಜೆಪಿ ಪ್ರಣಾಳಿಕೆಗಾಗಿ ಅಗತ್ಯ ಮಾಹಿತಿ ಒದಗಿಸಿದ್ದು ಕೇಂದ್ರ ಸರಕಾರದ ಅಧಿಕಾರಿಗಳು: ಆರೋಪ

Update: 2019-05-14 12:42 GMT

ಹೊಸದಿಲ್ಲಿ, ಮೇ 14: ಪ್ರಧಾನಿ ನರೇಂದ್ರ ಮೋದಿ ತಮ್ಮ ಚುನಾವಣಾ ಪ್ರಚಾರ ಉದ್ದೇಶಗಳಿಗೆ ತೆರಳುವ ಸ್ಥಳಗಳ ಬಗ್ಗೆ ವಿವಿಧ ಮಾಹಿತಿ ನೀಡುವಂತೆ ನೀತಿ ಆಯೋಗ ವಿವಿಧ ಪ್ರದೇಶಗಳ ಅಧಿಕಾರಿಗಳಿಗೆ ಸೂಚಿಸಿರುವುದನ್ನು scroll.in ತನಿಖಾ ವರದಿ ಪತ್ತೆ ಹಚ್ಚಿದ ಬೆನ್ನಲ್ಲೇ ಇಂತಹದ್ದೇ ತಪ್ಪನ್ನು ವಾಣಿಜ್ಯ ಸಚಿವಾಲಯವೂ ಮಾಡಿದೆ ಎಂದು ಹಿಂದುಸ್ಥಾನ್ ಟೈಮ್ಸ್ ವರದಿ ತಿಳಿಸಿದೆ.

ಸರಕಾರದ ಇನ್ವೆಸ್ಟ್ ಇಂಡಿಯಾ ಹಾಗೂ ಸ್ಟಾರ್ಟ್-ಅಪ್ ಇಂಡಿಯಾ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡುವಂತೆ  ಸಚಿವಾಲಯದ 130 ಅಧಿಕಾರಿಗಳಿಗೆ ಹಿರಿಯ ಬಂಡವಾಳ ವಿಶ್ಲೇಷಕ ಆಸ್ಥಾ ಗ್ರೋವರ್ ಇಮೇಲ್ ಕಳುಹಿಸಿದ್ದರೆಂದು ತಿಳಿದು ಬಂದಿದೆ

ಬಿಜೆಪಿ ತನ್ನ 2019 ಚುನಾವಣಾ ಪ್ರಣಾಳಿಕೆ ಬಿಡುಗಡೆಗೊಳಿಸುವ 12 ದಿನಗಳ ಮುನ್ನ- ಮಾರ್ಚ್ 28ರಂದು  ಈ ಇಮೇಲ್ ಕಳುಹಿಸಲಾಗಿತ್ತೆಂದು ವರದಿ ತಿಳಿಸಿದೆ.

“ಸ್ಟಾರ್ಟ್-ಅಪ್ ಇಂಡಿಯಾ ವಿಷನ್ ಡಾಕ್ಯುಮೆಂಟ್ ಗಾಗಿ ನೀವು ಸೂಚಿಸಿದ ಅಂಶಗಳ ಬಗ್ಗೆ ವಿವರ ನೀಡಿ. ಇದನ್ನು ಚುನಾವಣಾ ಪ್ರಣಾಳಿಕೆಗೆ  ಬಳಸಲಾಗುವುದು'' ಎಂದು ಇಮೇಲ್ ನಲ್ಲಿ ಬರೆಯಲಾಗಿತ್ತೆನ್ನಲಾಗಿದೆ. ಬಿಜೆಪಿ ಪ್ರಣಾಳಿಕೆ ಬಿಡುಗಡೆಯಾದಾಗ  ವಿಷನ್ 2024 ದಾಖಲೆಗಳಲ್ಲಿರುವಂತಹುದೇ ವಿವರಗಳು ಅದರಲ್ಲಿದ್ದವು.

ಜನ ಪ್ರತಿನಿಧಿತ್ವ ಕಾಯಿದೆ 1951 ಇದರ ಸೆಕ್ಷನ್ 123(7) ಅನ್ವಯ ಚುನಾವಣಾ ಪ್ರಚಾರಕ್ಕಾಗಿ ಸರಕಾರಿ ಅಧಿಕಾರಿಗಳ ಸಹಾಯ ಪಡೆಯುವಂತಿಲ್ಲ ಹಾಗೂ ಹೀಗೆ ಮಾಡಿದಲ್ಲಿ ಅಭ್ಯರ್ಥಿಯೊಬ್ಬ ಭ್ರಷ್ಟಾಚಾರದ ತಪ್ಪಿಗಾಗಿ ಅನರ್ಹಗೊಳ್ಳಬಹುದಾಗಿದೆ.

ಆದರೆ ಗ್ರೋವರ್ ಇಮೇಲ್ ಕಳುಹಿಸಿ ನಂತರ ಅದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಎಂದು ತಿಳಿಯುತ್ತಲೇ ಆವುಗಳನ್ನು ಪಡೆದವರು ಅದನ್ನು ಡಿಲೀಟ್ ಮಾಡುವಂತೆ ಗ್ರೋವರ್ ಮೌಖಿಕ ಸಂದೇಶ ನೀಡಿದ್ದರೆನ್ನಲಾಗಿದೆ.

1975ರಲ್ಲಿ ಇಂತಹುದೇ ಒಂದು ತಪ್ಪಿಗೆ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅಲಹಾಬಾದ್ ಹೈಕೋರ್ಟಿನಿಂದ ಚುನಾವಣೆ ಸ್ಪರ್ಧಿಸುವುದರಿಂದ ಆರು ವರ್ಷ ನಿಷೇಧ ಎದುರಿಸುವಂತಾಗಿ ನಂತರ ತುರ್ತು ಪರಿಸ್ಥಿತಿ ಹೇರಿದ್ದರು.

 ತಮ್ಮ ಪ್ರಚಾರ ಸಂಘಟಕನಾಗಿ ಇಂದಿರಾ ಗಾಂಧಿ ಸರಕಾರಿ ಅಧಿಕಾರಿಯೊಬ್ಬರನ್ನು ನೇಮಿಸಿದ್ದರು ಹಾಗೂ ಸ್ಥಳೀಯ ಅಧಿಕಾರಿಗಳು ಹಾಗೂ ಪೊಲೀಸರಿಗೆ ತಮ್ಮ ಪ್ರಚಾರ ಸಭೆಗಳನ್ನು  ಏರ್ಪಾಟುಗೊಳಿಸುವಂತೆ ಅವರು ಆದೇಶಿಸಿದ್ದರೆಂಬ ಆರೋಪ ಆಗ ಕೇಳಿ ಬಂದಿತ್ತು.

ಕೃಪೆ: thewire.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News