ರ್ಯಾಂಕ್ ಪಡೆದವರೂ ನರೇಗಾ ಕೂಲಿಗಳು!

Update: 2019-05-16 18:24 GMT

ಮಾನ್ಯರೇ,
ಇತ್ತೀಚೆಗೆ ಬಳ್ಳಾರಿ ಜಿಲ್ಲೆಯ ಹಿರೆಮಲ್ಲನಕೆರೆ ಗ್ರಾಮದಲ್ಲಿ ಸ್ನಾತಕೋತ್ತರ ಮತ್ತು ಪದವೀಧರ ವಿದ್ಯಾರ್ಥಿಗಳು ನರೇಗಾ ಉದ್ಯೋಗ ಖಾತ್ರಿ ಯೋಜನೆ ಅಡಿ ಕೂಲಿ ಕೆಲಸ ಮಾಡುತ್ತಿರುವ ಸುದ್ದಿ ಕೆಲವು ಪತ್ರಿಕೆಗಳಿಂದ ವರದಿಯಾಗಿದೆ.
ಉನ್ನತ ಉದ್ಯೋಗದಲ್ಲಿರಬೇಕಾದ ಯುವಕರು ಇಂದು ಕೂಲಿ ಕೆಲಸ ಮಾಡಲು ಪ್ರಮುಖ ಕಾರಣ ನಿರುದ್ಯೋಗ ಸಮಸ್ಯೆ. ರಾಜಕೀಯ ನಾಯಕರು ತಮ್ಮ ಸರಕಾರ ಸಾಕಷ್ಟು ಉದ್ಯೋಗ ಸೃಷ್ಟಿ ಮಾಡಿದೆ ಎನ್ನುತ್ತಾರೆ. ಹಾಗಾದರೆ ಆ ಉದ್ಯೋಗಗಳು ಎಲ್ಲಿ ಹೋದವು? ಸ್ವಯಂ ಉದ್ಯೋಗಕ್ಕಾಗಿ ತಂದ ಯೋಜನೆಗಳ ಫಲ ಯಾವ ಯುವಕರಿಗೆ ಸಿಕ್ಕಿತು?
ಈತನ್ಮಧ್ಯೆ ಗಮನಿಸಬೇಕಾದ ಸಂಗತಿ ಎಂದರೆ ಆ ಯುವಕರಲ್ಲಿ ಕೆಲವರು ಸ್ನಾತಕೋತ್ತರ ಪದವಿಯಲ್ಲಿ ರ್ಯಾಂಕ್‌ಗಳನ್ನು ಪಡೆದವರು. ಇವರಲ್ಲಿ ಒಬ್ಬರು ಈಗಾಗಲೇ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದು, ಆದರೆ ಆ ಸಂಸ್ಥೆಯಲ್ಲಿ ಕೆಲಸದ ಒತ್ತಡವಿಲ್ಲ ಎಂಬ ನೆಪ ಒಡ್ಡಿ ಹೊರದೂಡಿದ್ದಾರೆ.
ಎಷ್ಟು ಕಲಿತರೂ ಹೊಟ್ಟೆಗೆ ಹಿಟ್ಟು ಇಲ್ಲದ ಸ್ಥಿತಿಯಲ್ಲಿದ್ದಾಗ ಎಂತಹ ಕೆಲಸ ಸಿಕ್ಕರೂ ಮಾಡುವುದು ಅನಿವಾರ್ಯವಾಗುತ್ತದೆ. ಆ ಅನಿವಾರ್ಯತೆಯೇ ಈ ಯುವಕರಿಗೂ ಇದೆ. ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡಿದರೆ ತಿಂಗಳಿಗೆ ರೂ. ಐದು ಸಾವಿರದ ಆಸು ಪಾಸು ಸಿಗಬಹುದು. ಅದಕ್ಕಿಂತ ಈ ಕೆಲಸವೇ ಲೇಸು ಎಂದು ಈ ಯುವಕರು ಭಾವಿಸಿರಬೇಕು.

ಇದಕ್ಕೆಲ್ಲಾ ಕಾರಣ ಕೇಂದ್ರ ಮತ್ತು ರಾಜ್ಯ ಸರಕಾರಗಳು ವರ್ಷದಿಂದ ವರ್ಷಕ್ಕೆ ಸರಿಯಾದ ರೀತಿಯಲ್ಲಿ ಖಾಲಿ ಇರುವ ಸರಕಾರಿ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳದಿರುವುದು ಹಾಗೂ ಸ್ವಯಂ ಉದ್ಯೋಗ ಯೋಜನೆಗಳು ಅನರ್ಹರ ಪಾಲಾಗುತ್ತಿರುವುದಾಗಿದೆ. ಈಗಲಾದರೂ ಯುವಕರ ಬಾಳಿಗೆ ಬೆಳಕಾಗಲು ರಾಜಕೀಯ ನಾಯಕರು ಮುಂದಾಗಬೇಕು. ಆಗ ನೀವು ಇಷ್ಟರವರೆಗೆ ಬೊಬ್ಬೆ ಹೊಡೆದಿದ್ದಕ್ಕೂ ಸಾರ್ಥಕವಾಗುತ್ತದೆ. 

Similar News