ಸಂಪುಟ ಸಚಿವ ರಾಜ್‌ಭರ್ ಉಚ್ಚಾಟನೆಗೆ ಆದಿತ್ಯನಾಥ್ ಶಿಫಾರಸು

Update: 2019-05-20 05:43 GMT

 ಲಕ್ನೋ, ಮೇ 20: ಪೂರ್ವ ಉತ್ತರಪ್ರದೇಶದಲ್ಲಿ ಎಸ್ಪಿ-ಬಿಎಸ್ಪಿ ಮೈತ್ರಿಕೂಟ ಭಾರೀ ಗೆಲುವು ಸಾಧಿಸಲಿದ ಎಂದು ಹೇಳಿಕೆ ನೀಡಿದ್ದ್ದ ಸಂಪುಟ ಸಹೋದ್ಯೋಗಿ, ಸುಹೆಲ್‌ದೇವ್ ಭಾರತೀಯ ಸಮಾಜ (ಎಸ್‌ಬಿಎಸ್‌ಪಿ)ಪಕ್ಷದ ಮುಖ್ಯಸ್ಥ ಒ.ಪಿ ರಾಜ್‌ಭರ್‌ರನ್ನು ಉಚ್ಚಾಟಿಸಲು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜ್ಯಪಾಲರಿಗೆ ಶಿಫಾರಸು ಮಾಡಿದ್ದಾರೆ.

ರಾಜ್‌ಭರ್ ಉಚ್ಚಾಟನೆಯ ವಿಚಾರವನ್ನು ಟ್ವೀಟರ್‌ನಲ್ಲಿ ಘೋಷಿಸಿದ ಆದಿತ್ಯನಾಥ್,‘‘ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ದಿವ್ಯಾಂಜನ ಸಬಲೀಕರಣ ಸಚಿವರನ್ನು ಸಂಪುಟದಿಂದ ವಜಾಗೊಳಿಸುವಂತೆ ರಾಜ್ಯಪಾಲರಿಗೆ ಕೋರಿಕೆ ಸಲ್ಲಿಸಲಾಗಿದೆ’’ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ತನ್ನ ಆಯ್ಕೆಯ ಕ್ಷೇತ್ರಗಳಲ್ಲಿ ತನ್ನ ಪಕ್ಷಕ್ಕೆ ಟಿಕೆಟ್ ನೀಡಿಲ್ಲ ಎಂದು ದೂರಿ ರಾಜ್‌ಭರ್ ಈ ಹಿಂದೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ, ಅದನ್ನು ಸ್ವೀಕರಿಸಲಿಲ್ಲ. ರಾಜ್‌ಭರ್ 4ನೇ, ಐದನೇ, ಆರನೇ ಹಾಗೂ ಏಳನೇ ಹಂತದ ಲೋಕಸಭಾ ಚುನಾವಣೆಯಲ್ಲಿ 39 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ತನ್ನ ಉಚ್ಚಾಟನೆಯ ನಿರ್ಧಾರವನ್ನು ಸ್ವಾಗತಿಸಿದ ರಾಜ್‌ಭರ್, ತನ್ನ ಹಕ್ಕಿಗಾಗಿ ಹೋರಾಟ ಮುಂದುವರಿಸುವೆ ಎಂದು ಹೇಳಿದ್ದಾರೆ.

ಎಸ್‌ಬಿಎಸ್‌ಪಿ ಪಕ್ಷದ ಮುಖ್ಯಸ್ಥ ರಾಜ್‌ಭರ್ ಉತ್ತರಪ್ರದೇಶದಲ್ಲಿ ಬಿಜೆಪಿ ವಿರುದ್ಧ ಬಂಡೆದ್ದು, ಮಿರ್ಝಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಹಾಗೂ ಮಹಾರಾಜ್‌ಗಂಜ್ ಹಾಗೂ ಬನ್ಸ್‌ಗಾಂವ್‌ನಲ್ಲಿ ಎಸ್ಪಿ-ಬಿಎಸ್ಪಿ-ಆರ್‌ಎಲ್‌ಡಿ ಮೈತ್ರಿಕೂಟದ ಅಭ್ಯರ್ಥಿಗೆ ಬೆಂಬಲ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News