×
Ad

ಸಿಜೆಐ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣದ ನ್ಯಾಯೋಚಿತ ವಿಚಾರಣೆ ನಡೆದಿಲ್ಲ: ಜಸ್ಟಿಸ್ ಲೋಕೂರ್

Update: 2019-05-22 15:04 IST
ಫೋಟೊ ಕೃಪೆ: indialegallive.com

ಹೊಸದಿಲ್ಲಿ, ಮೇ 22: ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ವಿರುದ್ಧದ ಲೈಂಗಿಕ ಕಿರುಕುಳ ಆರೋಪ ಪ್ರಕರಣವನ್ನು ಸುಪ್ರೀಂ ಕೋರ್ಟ್ ಆರಂಭದಲ್ಲಿ ನಿಭಾಯಿಸಿದ ರೀತಿಯಲ್ಲಿ `ಸಾಂಸ್ಥಿಕ ತಾರತಮ್ಯ'ವಿತ್ತು ಎಂದು ಹೇಳಿರುವ ನಿವೃತ್ತ ನ್ಯಾಯಮೂರ್ತಿ ಜಸ್ಟಿಸ್ ಮದನ್ ಬಿ ಲೋಕೂರ್, “ಸಂತ್ರಸ್ತೆಯ ಪ್ರಕರಣದ ನ್ಯಾಯೋಚಿತ ವಿಚಾರಣೆ ನಡೆದಿಲ್ಲ ಎಂಬುದು ನನ್ನ ಅನಿಸಿಕೆ'' ಎಂದು ಹೇಳಿದ್ದಾರೆ.

ಕಳೆದ ಡಿಸೆಂಬರ್ ತಿಂಗಳಲ್ಲಿ ಜಸ್ಟಿಸ್ ಲೋಕೂರ್ ನಿವೃತ್ತರಾಗಿದ್ದರೆಂಬುದನ್ನು ಇಲ್ಲಿ ಸ್ಮರಿಸಬಹುದು.

“ಆಕೆಯ ಆರೋಪಗಳ ಬಗ್ಗೆ ತನಿಖೆ ನಡೆಸಿದ ಸುಪ್ರೀಂ ಕೋರ್ಟಿನ ಆಂತರಿಕ ಸಮಿತಿಯ ವರದಿಯ ಪ್ರತಿಯನ್ನು ದೂರುದಾರೆಗೆ ನೀಡುವ ಮೂಲಕ ಆಕೆ ಮತ್ತು ಇತರರು ಎತ್ತಿದ ಪ್ರಶ್ನೆಗಳಿಗೆ ಉತ್ತರ ದೊರೆಯುವಂತೆ ಮಾಡಬೇಕು'' ಎಂದು ಅವರು ಹೇಳಿದರು.

ಪ್ರಕರಣದ ತನಿಖೆಯಲ್ಲಿ ಪಾರದರ್ಶಕತೆಯಿರಬೇಕೆಂದು ಆಗ್ರಹಿಸಿರುವ ಜಸ್ಟಿಸ್ ಲೋಕೂರ್, ಆಂತರಿಕ ಸಮಿತಿಯ ವರದಿ ಸಲ್ಲಿಕೆಯಾದ ನಂತರ ಅದರ ಗತಿಯೇನಾಗಿದೆ ಎಂದು ಪ್ರಶ್ನಿಸಿದರು.

“ಈ ವರದಿಯನ್ನು ಸಂಬಂಧಿತ ನ್ಯಾಯಾಧೀಶರು ಒಪ್ಪಿದ್ದಾರೆಯೇ ?, ಈ ಬಗ್ಗೆ ಏನಾದರೂ  ಆದೇಶ ಹೊರಡಿಸಲಾಗಿದೆಯೇ?, ನ್ಯಾಯಾಧೀಶರು ಈ ವರದಿಗೆ ಅಸಮ್ಮತಿ ವ್ಯಕ್ತಪಡಿಸಬಹುದೇ?'' ಎಂದು ಹೇಳಿದ ಅವರು, ಇಂತಹ ಆಂತರಿಕ ಸಮಿತಿಯ ವರದಿಯನ್ನು ನ್ಯಾಯಾಧೀಶರು ಒಪ್ಪಬಹುದು ಯಾ ತಿರಸ್ಕರಿಸಲೂಬಹುದು, ಆದರೆ ನ್ಯಾಯಾಧೀಶರು ಈ ಬಗ್ಗೆ ಏನನ್ನೂ ಹೇಳಿಲ್ಲ ಎಂದು ಜಸ್ಟಿಸ್ ಲೋಕೂರ್ ಹೇಳಿದರು.

ಈ ಪ್ರಕರಣವನ್ನು ಮೊದಲು ವಿಚಾರಣೆಗೆ ಎತ್ತಿಕೊಳ್ಳಲು ಸುಪ್ರೀಂ ಕೋರ್ಟ್ ನ್ಯಾಯಪೀಠ ಸಭೆ ಸೇರಿದಾಗ ಅದರ ಅಧ್ಯಕ್ಷತೆಯನ್ನು ಆರೋಪ ಎದುರಿಸುತ್ತಿರುವ ಸಿಜೆಐ ಅವರೇ ವಹಿಸಿದ್ದು ಸಾಂಸ್ಥಿಕ ತಾರತಮ್ಯದ  ಆರಂಭವಾಗಿತ್ತು. ಮೇಲಾಗಿ ಆಂತರಿಕ ಸಮಿತಿಯನ್ನು ಹಾಗೂ ಅದರ ನೇತೃತ್ವ ವಹಿಸುವವರನ್ನೂ ಆರೋಪ ಎದುರಿಸುತ್ತಿರುವವರೇ ಆರಿಸಿದ್ದರು, ಆಕೆ ಮಾಡಿದ ಕಿರುಕುಳದ ಆರೋಪವನ್ನು ಸಾಬೀತುಪಡಿಸಲು ಕಷ್ಟವಾದರೂ ಆಕೆಯನ್ನು ಬಲಿಪಶು ಮಾಡಲಾಗಿತ್ತೆಂಬ ಆರೋಪದ ಬಗ್ಗೆ ಆಂತರಿಕ ಸಮಿತಿಗೆ ತನಿಖೆ ನಡೆಸಲು ಹೇಳಲಾಗಿಲ್ಲ ಎಂದು ಜಸ್ಟಿಸ್ ಲೋಕೂರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News