ಕೇಂದ್ರದ ಆಕ್ಷೇಪಗಳನ್ನು ತಳ್ಳಿಹಾಕಿದ ಕೊಲಿಜಿಯಂ: ಶೀಘ್ರ ನಾಲ್ವರು ಸುಪ್ರೀಂ ನ್ಯಾಯಾಧೀಶರ ನೇಮಕ

Update: 2019-05-22 16:15 GMT

ಹೊಸದಿಲ್ಲಿ,ಮೇ 22: ಪದೋನ್ನತಿಗಾಗಿ ತಾನು ಶಿಫಾರಸು ಮಾಡಿದ್ದ ಉಚ್ಚ ನ್ಯಾಯಾಲಯಗಳ ಇಬ್ಬರು ನ್ಯಾಯಾಧೀಶರ ಹೆಸರುಗಳಿಗೆ ಕೇಂದ್ರವು ವ್ಯಕ್ತಪಡಿಸಿರುವ ಆಕ್ಷೇಪಗಳನ್ನು ಸರ್ವೋಚ್ಚ ನ್ಯಾಯಾಲಯದ ಕೊಲಿಜಿಯಂ ತಿರಸ್ಕರಿಸಿದೆ. ಇದರೊಂದಿಗೆ ಶೀಘ್ರವೇ ನಾಲ್ವರು ನೂತನ ನ್ಯಾಯಾಧೀಶರು ಸರ್ವೋಚ್ಚ ನ್ಯಾಯಾಲಯಕ್ಕೆ ನೇಮಕಗೊಳ್ಳುವ ಸಾಧ್ಯತೆಯಿದ್ದು,ಐದು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅದು 31 ನ್ಯಾಯಾಧೀಶರೊಂದಿಗೆ ತನ್ನ ಪೂರ್ಣ ಸಾಮರ್ಥ್ಯದಿಂದ ಕಾರ್ಯ ನಿರ್ವಹಿಸಲಿದೆ.

ನ್ಯಾಯಾಧೀಶರಾದ ಅನಿರುದ್ಧ ಬೋಸ್, ಎ.ಎಸ್.ಬೋಪಣ್ಣ,ಭೂಷಣ ರಾಮಕೃಷ್ಣ ಗವಾಯಿ ಮತ್ತು ಸೂರ್ಯಕಾಂತ ಅವರು ಕೊಲಿಜಿಯಂನಿಂದ ಶ್ರೇಷ್ಠ ನ್ಯಾಯಾಲಯಕ್ಕೆ ಪದೋನ್ನತಿಗೊಂಡಿರುವ ನ್ಯಾಯಾಧೀಶರಾಗಿದ್ದಾರೆ.

ಜಾರ್ಖಂಡ್ ಉಚ್ಚ ನ್ಯಾಯಾಲಯದ ನ್ಯಾ.ಬೋಸ್ ಮತ್ತು ಗುವಾಹಟಿ ಉಚ್ಚ ನ್ಯಾಯಾಲಯದ ನ್ಯಾ.ಬೋಪಣ್ಣ ಅವರ ಪದೋನ್ನತಿಗೆ ಶಿಫಾರಸುಗಳನ್ನು ಈ ತಿಂಗಳ ಆರಂಭದಲ್ಲಿ ಕೊಲಿಜಿಯಮ್‌ಗೆ ಮರಳಿಸಿದ್ದ ಕೇಂದ್ರ ಸರಕಾರವು ಜ್ಯೇಷ್ಠತೆಯ ಬಗ್ಗೆ ಕಳವಳಗಳನ್ನು ಉಲ್ಲೇಖಿಸಿತ್ತು. ಕೊಲಿಜಿಯಂ ಎ.12ರಂದು ಈ ಶಿಫಾರಸುಗಳನ್ನು ಕೇಂದ್ರಕ್ಕೆ ಕಳುಹಿಸಿತ್ತು.

ಪ್ರತಿಭೆ,ಜ್ಯೇಷ್ಠತೆ ಮತ್ತು ಉಚ್ಚ ನ್ಯಾಯಾಲಯಗಳಿಗೆ ಪ್ರಾತಿನಿಧ್ಯದ ಆಧಾರದಲ್ಲಿ ನ್ಯಾಯಮೂರ್ತಿಗಳಾದ ಬೋಸ್ ಮತ್ತು ಬೋಪಣ್ಣ ಅವರ ಪದೋನ್ನತಿಗೆ ಕೊಲಿಜಿಯಂ ನಿರ್ಧರಿಸಿದೆ ಎಂದು ಹಿರಿಯ ಸುಪ್ರೀಂ ನ್ಯಾಯಾಧೀಶರು ಸಹಿ ಹಾಕಿರುವ ನಿರ್ಣಯದಲ್ಲಿ ಹೇಳಲಾಗಿದೆ.

ಮು.ನ್ಯಾ.ರಂಜನ ಗೊಗೊಯಿ ನೇತೃತ್ವದ ಐವರು ಸದಸ್ಯರ ಕೊಲಿಜಿಯಂ ಬಳಿಕ ಬಾಂಬೆ ಉಚ್ಚ ನ್ಯಾಯಾಲಯದ ನ್ಯಾ.ಗವಾಯಿ ಮತ್ತು ಹಿಮಾಚಲ ಪ್ರದೇಶ ಉಚ್ಚ ನ್ಯಾಯಾಲಯದ ನ್ಯಾ.ಸೂರ್ಯಕಾಂತ ಅವರ ಹೆಸರುಗಳನ್ನೂ ಸರ್ವೋಚ್ಚ ನ್ಯಾಯಾಲಯಕ್ಕೆ ನೇಮಕಕ್ಕಾಗಿ ಶಿಫಾರಸು ಮಾಡಿತ್ತು.

ಸೇವಾ ಜ್ಯೇಷ್ಠತೆಯಂತೆ ನ್ಯಾ.ಗವಾಯಿ ಅವರು 2025ರಲ್ಲಿ ಭಾರತದ ಮುಖ್ಯ ನ್ಯಾಯಾಧೀಶರ ಹುದ್ದೆಗೆ ಹೆಸರಿಸಲ್ಪಡುತ್ತಾರೆ ಮತ್ತು ನ್ಯಾ.ಕೆ.ಜಿ.ಬಾಲಕೃಷ್ಣನ್ ಬಳಿಕ ಎರಡನೇ ದಲಿತ ಮುಖ್ಯ ನ್ಯಾಯಾಧೀಶರಾಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News