ರಾಹುಲ್ ಇನ್ನೂ ರಾಜೀನಾಮೆ ನೀಡದಿರುವುದು ಅಚ್ಚರಿ ತಂದಿದೆ: ರಾಮಚಂದ್ರ ಗುಹಾ

Update: 2019-05-24 16:10 GMT

ಹೊಸದಿಲ್ಲಿ, ಮೇ 24: ರಾಹುಲ್ ಗಾಂಧಿಗೆ ತನ್ನ ರಾಜಕೀಯ ಜೀವನದಲ್ಲೇ ಅತ್ಯಂತ ಕೆಟ್ಟ ದಿನಗಳು ಎದುರಾಗಿರುವಂತೆಯೇ, ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಕಳಪೆ ಸಾಧನೆಯ ಹಿನ್ನೆಲೆಯಲ್ಲಿ ರಾಹುಲ್ ಪಕ್ಷಾಧ್ಯತೆಗೆ ರಾಜೀನಾಮೆ ನೀಡಬೇಕೆಂಬ ಕೂಗು ಬಲವಾಗುತ್ತಿದೆ.

ಇದಕ್ಕೆ ಪೂರಕವಾಗಿ ಖ್ಯಾತ ಇತಿಹಾಸಜ್ಞ ರಾಮಚಂದ್ರ ಗುಹಾ ಟ್ವೀಟ್ ಮಾಡಿದ್ದು ರಾಹುಲ್ ಇನ್ನೂ ರಾಜೀನಾಮೆ ಸಲ್ಲಿಸದಿರುವುದು ಅಚ್ಚರಿ ತಂದಿದೆ ಎಂದು ಹೇಳಿದ್ದಾರೆ. ರಾಮಚಂದ್ರ ಗುಹಾ ರಾಹುಲ್ ಗಾಂಧಿಯ ಅಜ್ಜ, ದೇಶದ ಪ್ರಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಪ್ರಶಂಸಕರಾಗಿದ್ದಾರೆ. ಆತ್ಮಾಭಿಮಾನ ಹಾಗೂ ರಾಜಕೀಯ ವ್ಯಾವಹಾರಿಕತೆಯಿದ್ದರೆ ಕಾಂಗ್ರೆಸ್ ಪಕ್ಷ ಹೊಸ ನಾಯಕನನ್ನು ಆಯ್ಕೆ ಮಾಡಬೇಕು. ಆದರೆ ಬಹುಷಃ ಕಾಂಗ್ರೆಸ್ ಇದ್ಯಾವುದನ್ನೂ ಹೊಂದಿಲ್ಲ ಎಂದು ಗುಹಾ ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್‌ನಲ್ಲಿರುವ ವಂಶ ಪರಂಪರೆಯ ಬಗ್ಗೆ ಚುನಾವಣಾ ವಿಶ್ಲೇಷಕ ಯೋಗೇಂದ್ರ ಯಾದವ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಗುಹಾ, ಪಕ್ಷವು ವಂಶಾಡಳಿತಕ್ಕೆ ತಿಲಾಂಜಲಿ ನೀಡಬೇಕು ಎಂದಿದ್ದಾರೆ.

ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿ ಭಾರೀ ಬಹುಮತ ಗಳಿಸಲಿದೆ ಎಂಬ ಮುನ್ಸೂಚನೆ ವ್ಯಕ್ತವಾದ ಬಳಿಕ ಟ್ವೀಟ್ ಮಾಡಿದ್ದ ಯೋಗೇಂದ್ರ ಯಾದವ್, ಕಾಂಗ್ರೆಸ್ ಸಾಯಲೇಬೇಕು. ಭಾರತದ ಸಿದ್ಧಾಂತವನ್ನು ರಕ್ಷಿಸಬೇಕಿದ್ದರೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ ಓಟಕ್ಕೆ ತಡೆಯೊಡ್ಡಬೇಕು. ಇದು ಸಾಧ್ಯವಾಗದಿದ್ದರೆ ಕಾಂಗ್ರೆಸ್‌ಗೆ ದೇಶದ ಇತಿಹಾಸದಲ್ಲಿ ಯಾವುದೇ ರಚನಾತ್ಮಕ ಪಾತ್ರವಿಲ್ಲ. ಪರ್ಯಾಯ ಶಕ್ತಿಯನ್ನು ರಚಿಸುವಲ್ಲಿ ಈಗ ಕಾಂಗ್ರೆಸ್ ಪಕ್ಷವೇ ಅತ್ಯಂತ ದೊಡ್ಡ ತಡೆಯಾಗಿ ಪರಿಣಮಿಸಿದೆ ಎಂದು ಹೇಳಿದ್ದರು. ಇದು ಭಾರೀ ಚರ್ಚೆಗೆ ಕಾರಣವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News