ಗುಜರಾತ್ ವಿಧಾನಸಭೆ ಉಪಚುನಾವಣೆ: ನಾಲ್ಕೂ ಸ್ಥಾನಗಳಲ್ಲಿ ಬಿಜೆಪಿ ಜಯಭೇರಿ

Update: 2019-05-24 16:22 GMT

ಅಹ್ಮದಾಬಾದ್, ಮೇ 24: ಗುಜರಾತ್ ವಿಧಾನಸಭೆಯ ನಾಲ್ಕು ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಗೆಲುವು ದಾಖಲಿಸುವುದರೊಂದಿಗೆ ಪಕ್ಷದ ಸದಸ್ಯರ ಸಂಖ್ಯೆ 104ಕ್ಕೇರಿದೆ.

 182 ಸ್ಥಾನಬಲದ ಗುಜರಾತ್ ವಿಧಾನಸಭೆಯ ಉಪಚುನಾವಣೆ ಲೋಕಸಭಾ ಚುನಾವಣೆಯ ಜೊತೆಗೇ ನಡೆದಿದ್ದು ಗುರುವಾರ ಆರಂಭಗೊಂಡ ಮತ ಎಣಿಕೆಯ ಪ್ರಕ್ರಿಯೆ ಶುಕ್ರವಾರ ಅಂತಿಮಗೊಂಡು ಫಲಿತಾಂಶ ಪ್ರಕಟಿಸಲಾಗಿದೆ. ಧೃಂಗಾಧ್ರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ್ಸೋತ್ತಮ್ ಸಬಾರಿಯಾ ಕಾಂಗ್ರೆಸ್ ಪಕ್ಷದ ದಿನೇಶ್ ಪಟೇಲ್‌ರನ್ನು 34,280 ಮತಗಳ ಅಂತರದಿಂದ ಸೋಲಿಸಿದರು. ಜಾಮ್‌ನಗರ(ಗ್ರಾಮೀಣ) ಕ್ಷೇತ್ರದಲ್ಲಿ ಬಿಜೆಪಿಯ ರಾಘವ್‌ಜಿ ಪಟೇಲ್ ಕಾಂಗ್ರೆಸ್‌ನ ಜಯಂತಿಬಾಯಿ ಸಭಾಯರನ್ನು 33,022 ಮತಗಳ ಅಂತರದಿಂದ ಸೋಲಿಸಿದರೆ, ಮನವದರ್ ಕ್ಷೇತ್ರದಲ್ಲಿ ಬಿಜೆಪಿಯ ಜವಾಹರ್ ಚಾವ್ಡ ಕಾಂಗ್ರೆಸ್‌ನ ಅರವಿಂದ್ ಲದಾನಿಯನ್ನು 9,759 ಮತಗಳಿಂದ ಸೋಲಿಸಿದರು. ಉಂಝಾ ಕ್ಷೇತ್ರದಲ್ಲಿ ಬಿಜೆಪಿಯ ಆಶಾಬೆನ್ ಪಟೇಲ್ ಕಾಂಗ್ರೆಸ್‌ನ ಕಾಂತಿಬಾಯಿ ಪಟೇಲ್ ವಿರುದ್ಧ 23,072 ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ.

ಈ ಹಿಂದೆ ಈ ನಾಲ್ಕೂ ಕ್ಷೇತ್ರಗಳಲ್ಲಿ ಗೆದ್ದಿದ್ದ ಅಭ್ಯರ್ಥಿಗಳು ಬಳಿಕ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಗೊಂಡ ಕಾರಣ ಉಪ ಚುನಾವಣೆ ನಡೆದಿತ್ತು.

ಪಕ್ಷಕ್ಕೆ ಸೇರ್ಪಡೆಗೊಂಡ ನಾಲ್ಕು ಕಾಂಗ್ರೆಸ್ ಸದಸ್ಯರಲ್ಲಿ ಮೂವರನ್ನು ತನ್ನ ಅಭ್ಯರ್ಥಿಗಳನ್ನಾಗಿ ಬಿಜೆಪಿ ಉಪಚುನಾವಣೆಯಲ್ಲಿ ಕಣಕ್ಕಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News