‘ಹಿಂದು ರಾಷ್ಟ್ರ’ದ ಉಲ್ಲೇಖವಿದ್ದ ತೀರ್ಪನ್ನು ತಳ್ಳಿ ಹಾಕಿದ ಮೇಘಾಲಯ ಹೈಕೋರ್ಟ್

Update: 2019-05-24 16:37 GMT

ಶಿಲ್ಲಾಂಗ್,ಮೇ 24: ವಿಭಜನೆಯ ಸಂದರ್ಭದಲ್ಲಿ ಭಾರತವನ್ನು ‘ಹಿಂದು ರಾಷ್ಟ್ರ ’ಎಂದು ಘೋಷಿಸಬೇಕಾಗಿತ್ತು ಎಂದು ಉಲ್ಲೇಖಿಸಲಾಗಿದ್ದ ಏಕ ನ್ಯಾಯಾಧೀಶ ಪೀಠದ ವಿವಾದಾತ್ಮಕ ತೀರ್ಪನ್ನು ಮೇಘಾಲಯ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠವು ತಳ್ಳಿಹಾಕಿದೆ.

ನ್ಯಾ.ಎಸ್.ಆರ್.ಸೇನ್ ಅವರ ತೀರ್ಪು ಕಾನೂನಾತ್ಮಕವಾಗಿ ದೋಷಪೂರ್ಣವಾಗಿದೆ ಮತ್ತು ಸಾಂವಿಧಾನಿಕ ನೀತಿಗಳಿಗೆ ಅನುಗುಣವಾಗಿಲ್ಲ ಎಂದು ಹೇಳಿರುವ ಮುಖ್ಯ ನ್ಯಾಯಾಧೀಶರಾದ ಮುಹಮ್ಮದ್ ಯಾಕೂಬ್ ಮಿರ್ ಮತ್ತು ನ್ಯಾಯಮೂರ್ತಿ ಎಚ್.ಎಸ್.ಥಾಂಗ್‌ಖೀವ್ ಅವರ ಪೀಠವು,ತೀರ್ಪಿನಲ್ಲಿಯ ಅಭಿಪ್ರಾಯಗಳು ಮತ್ತು ನಿರ್ದೇಶಗಳು ಸಂಪೂರ್ಣವಾಗಿ ಅನಗತ್ಯವಾಗಿವೆ ಎಂದು ಬೆಟ್ಟುಮಾಡಿದೆ.

ಪಾಕಿಸ್ತಾನ,ಬಾಂಗ್ಲಾದೇಶ ಮತ್ತು ಅಫಘಾನಿಸ್ತಾನಗಳಿಂದ ಬಂದಿರುವ ಹಿಂದುಗಳು, ಸಿಕ್ಖರು, ಜೈನರು, ಬೌದ್ಧರು, ಪಾರ್ಸಿಗಳು, ಕ್ರೈಸ್ತರು, ಖಾಸಿಗಳು, ಜೈಂತಿಯಾಗಳು ಮತ್ತು ಗ್ಯಾರೊಗಳು ಭಾರತದಲ್ಲಿ ವಾಸವಾಗಲು ಮತ್ತು ಅವರಿಗೆ ಪೌರತ್ವವನ್ನು ನೀಡಲು ಅವಕಾಶ ಕಲ್ಪಿಸುವ ಕಾನೂನುಗಳನ್ನು ಜಾರಿಗೊಳಿಸುವಂತೆ ನ್ಯಾ.ಸೇನ್ ಅವರು ಕಳೆದ ವರ್ಷದ ಡಿ.10ರ ತನ್ನ ತೀರ್ಪಿನಲ್ಲಿ ಪ್ರಧಾನಿ, ಗೃಹಸಚಿವ, ಕಾನೂನು ಸಚಿವ ಮತ್ತು ಸಂಸದರನ್ನು ಆಗ್ರಹಿಸಿದ್ದರು. ವಸತಿ ಪ್ರಮಾಣಪತ್ರಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ನೀಡಲಾಗಿದ್ದ ಈ ತೀರ್ಪು ‘‘ವಿಭಜನೆಯ ಸಂದರ್ಭದಲ್ಲಿ ಪಾಕಿಸ್ತಾನವು ತನ್ನನ್ನು ಇಸ್ಲಾಮಿಕ್ ದೇಶವೆಂದು ಘೋಷಿಸಿಕೊಂಡಿತ್ತು ಮತ್ತು ಧರ್ಮದ ಆಧಾರದಲ್ಲಿ ವಿಭಜನೆಯಾಗಿದ್ದರಿಂದ ಭಾರತವನ್ನು ಹಿಂದು ರಾಷ್ಟ್ರವೆಂದು ಘೋಷಿಸಬೇಕಾಗಿತ್ತು. ಆದರೆ ಅದು ಜಾತ್ಯತೀತ ದೇಶವಾಗಿ ಉಳಿದುಕೊಂಡಿದೆ ’’ಎಂದು ಹೇಳಿತ್ತು.

ಈ ತೀರ್ಪು ವ್ಯಾಪಕ ಆಕ್ರೋಶವನ್ನು ಸೃಷ್ಟಿಸಿದ್ದು,ಪರಿಣಾಮವಾಗಿ ನ್ಯಾ.ಸೇನ್ ಅವರು ಸ್ಪಷ್ಟೀಕರಣ ಹೇಳಿಕೆಯನ್ನು ಹೊರಡಿಸುವಂತಾಗಿತ್ತು. ‘ನಾನು ಧರ್ಮಾಂಧನಲ್ಲ,ನನ್ನ ಪಾಲಿಗೆ ದೇವರು ಒಬ್ಬನೇ ಆಗಿರುವುದರಿಂದ ನಾನು ಎಲ್ಲ ಧರ್ಮಗಳನ್ನೂ ಗೌರವಿಸುತ್ತೇನೆ’ ಎಂದು ಅವರು ಹೇಳಿದ್ದರು.

ನ್ಯಾ.ಸೇನ್ ತೀರ್ಪಿನ ವಿರುದ್ಧ ಮೇಲ್ಮನವಿಯೊಂದನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದ್ದು ಅದು ವಿಚಾರಣೆಗೆ ಬಾಕಿಯಿದೆ. ಆದರೆ ಇದು ದಿಢೀರ್ ಮೇಲ್ಮನವಿಯನ್ನು ಇತ್ಯರ್ಥಗೊಳಿಸಲು ವಿಭಾಗೀಯ ಪೀಠಕ್ಕೆ ಅಡ್ಡಿಯಾಗುವುದಿಲ್ಲ ಎಂದು ಉಚ್ಚ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News