ಸೂರತ್ ಬೆಂಕಿ ಅವಘಡ: ಸಾವಿನ ಸಂಖ್ಯೆ 20ಕ್ಕೆ; ತರಬೇತುದಾರನ ಬಂಧನ

Update: 2019-05-25 14:53 GMT

ಸೂರತ್, ಮೇ.25: ಗುಜರಾತ್‌ನ ಸೂರತ್‌ನಲ್ಲಿರುವ ಕೋಚಿಂಗ್ ಕೇಂದ್ರದಲ್ಲಿ ಸಂಭವಿಸಿದ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಕೇಂದ್ರದ ತರಬೇತುದಾರನನ್ನು ಶನಿವಾರ ಬಂಧಿಸಲಾಗಿದೆ ಮತ್ತು ಮೂವರ ವಿರುದ್ದ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 20ಕ್ಕೇರಿದ್ದು 20 ಮಂದಿ ಗಾಯಗೊಂಡಿದ್ದಾರೆ. ಎಲ್ಲ ರೀತಿಯ ಟ್ಯೂಶನ್ ತರಗತಿಗಳನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಅಗತ್ಯ ಅಗ್ನಿ ಸುರಕ್ಷಾ ಪರಿಶೀಲನೆ ನಡೆಸಿದ ನಂತರ ಅಗ್ನಿ ಸುರಕ್ಷ ಪ್ರಮಾಣಪತ್ರ ನೀಡಿದ ನಂತರವಷ್ಟೇ ಕೋಚಿಂಗ್ ತರಗತಿಗಳನ್ನು ಪುನರ್ ಆರಂಭಿಸಲಾಗುವುದು ಎಂದು ಸೂರತ್ ಪೊಲೀಸ್ ಆಯುಕ್ತ ಸತೀಶ್ ಶರ್ಮಾ ತಿಳಿಸಿದ್ದಾರೆ.

ಸೂರತ್‌ನ ಸರ್ತನದಲ್ಲಿರುವ ತಕ್ಷಶಿಲಾ ಕೋಚಿಂಗ್ ಕಾಂಪ್ಲೆಕ್ಸ್‌ನ ಎರಡನೇ ಮಹಡಿಯಲ್ಲಿ ಶುಕ್ರವಾರ ಬೆಂಕಿ ಕಾಣಿಸಿಕೊಂಡಿತ್ತು. ಈ ಕಟ್ಟಡದಲ್ಲಿ ನಾಲ್ಕು ಕೋಚಿಂಗ್ ಕೇಂದ್ರಗಳು ಕಾರ್ಯಾಚರಿಸುತ್ತಿವೆ. ಇವುಗಳಲ್ಲಿ ಒಂದು ಬೇಸಿಗೆ ರಜೆಯ ಸಮಯದಲ್ಲಿ ಮಕ್ಕಳಿಗೆ ಚಿತ್ರಕಲೆ ತರಗತಿಗಳನ್ನು ನಡೆಸುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಶುಕ್ರವಾರದ ದುರಂತದಲ್ಲಿ ಮೃತಪಟ್ಟವರಲ್ಲಿ ಹೆಚ್ಚಿನವರು ಕೋಚಿಂಗ್‌ಗೆ ಬರುತ್ತಿದ್ದ ಹದಿಹರೆಯದವರಾಗಿದ್ದಾರೆ. ಇವರಲ್ಲಿ ಕೆಲವರು ಹೊಗೆಯನ್ನು ಉಸಿರಾಡಿದ ಕಾರಣ ಸಾವನ್ನಪ್ಪಿದ್ದರೆ ಬಹಳಷ್ಟು ಮಂದಿ ಬೆಂಕಿಯಿಂದ ತಪ್ಪಿಸಿಕೊಳ್ಳುವ ಧಾವಂತದಲ್ಲಿ ಕಟ್ಟಡದ ಕಿಟಕಿಯಿಂದ ಹೊರ ಜಿಗಿದ ಪರಿಣಾಮ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News