35ಎ, 370ನೇ ವಿಧಿ ರದ್ದುಗೊಳಿಸಲು ಮೋದಿಗೆ ಅಸಾಧ್ಯ: ಫಾರೂಕ್ ಅಬ್ದುಲ್ಲಾ

Update: 2019-05-25 15:13 GMT

ಶ್ರೀನಗರ, ಮೇ.25: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿರುವ 35ಎ ಮತ್ತು 370ನೇ ವಿಧಿಯನ್ನು ತೆಗೆದುಹಾಕಲು ಪ್ರಧಾನಿ ನರೇಂದ್ರ ಮೋದಿಯಿಂದ ಅಸಾಧ್ಯ ಎಂದು ನ್ಯಾಶನಲ್ ಕಾನ್ಫರೆನ್ಸ್ ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ತಿಳಿಸಿದ್ದಾರೆ.

ಮೋದಿ ಅದೆಷ್ಟು ಬೇಕಾದರೂ ಪ್ರಭಾವಶಾಲಿಯಾಗಿರಲಿ. ಆದರೆ ಜಮ್ಮು ಮತ್ತು ಕಾಶ್ಮೀರದಿಂದ 370 ಮತ್ತು 35ಎ ವಿಧಿಯನ್ನು ತೆಗೆಯಲು ಅವರಿಂದ ಸಾಧ್ಯವಿಲ್ಲ. ದೇಶವನ್ನು ವಿಭಜಿಸಲು ಬದಲು ಮೋದಿ ಜನರನ್ನು ಒಟ್ಟುಗೂಡಿಸಲು ಪ್ರಯತ್ನಿಸಬೇಕು ಎಂದು ಅಬ್ದುಲ್ಲಾ ಅಭಿಪ್ರಾಯಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

“370 ಮತ್ತು 35ಎ ವಿಧಿಯ ನಮ್ಮ ಹಕ್ಕನ್ನು ರಕ್ಷಿಸಬೇಕಿದೆ. ಇದು ನಮಗೆ ಬಹಳ ಮುಖ್ಯವಾಗಿದೆ. ನಾವು ಈ ದೇಶದ ಸೈನಿಕರೇ ಹೊರತು ಶತ್ರುಗಳಲ್ಲ” ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ತಿಳಿಸಿದ್ದಾರೆ. ಗುರುವಾರ ಘೋಷಣೆಯಾದ ಲೋಕಸಭಾ ಚುನಾವಣಾ ಫಲಿತಾಂಶದಲ್ಲಿ ನ್ಯಾಶನಲ್ ಕಾನ್ಫರೆನ್ಸ್ ಕಾಶ್ಮೀರ ಕಣಿವೆಯ ಎಲ್ಲ ಮೂರು ಸ್ಥಾನಗಳಲ್ಲೂ ಜಯ ಗಳಿಸಿದ್ದರೆ ಬಿಜೆಪಿ ಜಮ್ಮು, ಉದಂಪುರ್ ಮತ್ತು ಲಡಾಖ್‌ನ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ, ಜಮ್ಮು ಕಾಶ್ಮೀರದಿಂದ 35ಎ ಮತ್ತು 370ನೇ ವಿಧಿಯನ್ನು ರದ್ದುಗೊಳಿಸುವ ಅಂಶವನ್ನು ಸೇರಿಸಿದ ನಂತರ ಎರಡು ಪಕ್ಷಗಳ ಮಧ್ಯೆ ಹಗ್ಗಜಗ್ಗಾಟ ಉಂಟಾಗಿತ್ತು. “ಅದು ಹೇಗೆ ಬಿಜೆಪಿ 370ನೇ ವಿಧಿಯನ್ನು ತೆಗೆದು ಹಾಕುತ್ತದೆ ನೋಡುವ. ಇಲ್ಲಿ ಯಾರು ತನ್ನ ಧ್ವಜವನ್ನು ಹಾರಿಸಲು ಸಿದ್ಧರಿದ್ದಾರೆ ಎನ್ನುವುದನ್ನು ನಾವೂ ನೋಡೇ ಬಿಡುತ್ತೇವೆ. 35ಎ ವಿಧಿಯನ್ನು ರದ್ದುಗೊಳಿಸುವ ಮೂಲಕ ನೀವು ನಮ್ಮ ಹಕ್ಕುಗಳನ್ನು ಹತ್ತಿಕ್ಕಬಹುದು ಎಂದು ಭಾವಿಸಿದ್ದೀರಾ? ಆಗ ನಾವೇನು ಸುಮ್ಮನಿರಲಿದ್ದೇವೆಯೆ? ನಾವು ಹೋರಾಟ ಮಾಡುತ್ತೇವೆ” ಎಂದು ಫಾರೂಕ್ ಅಬ್ದುಲ್ಲಾ ಬಿಜೆಪಿಗೆ ಎಚ್ಚರಿಕೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News