ಶತಕದಿಂದ ಗಮನ ಸೆಳೆದ ಸ್ಟೀವ್ ಸ್ಮಿತ್

Update: 2019-05-25 18:29 GMT

ಸೌಥಾಂಪ್ಟನ್, ಮೇ 25: ಚೆಂಡು ವಿರೂಪ ಪ್ರಕರಣದಲ್ಲಿ ಒಂದು ವರ್ಷ ನಿಷೇಧ ಶಿಕ್ಷೆ ಅನುಭವಿಸಿದ ಬಳಿಕ ಇದೇ ಮೊದಲ ಬಾರಿ ಇಂಗ್ಲೆಂಡ್ ವಿರುದ್ಧ ಆಡಿದ್ದ ವಿಶ್ವಕಪ್‌ನ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯದ ಡೇವಿಡ್ ವಾರ್ನರ್ ಹಾಗೂ ಸ್ಟೀವನ್ ಸ್ಮಿತ್ ಗಮನಾರ್ಹ ಪ್ರದರ್ಶನ ನೀಡಿದರು. ಸ್ಮಿತ್ ಹಾಗೂ ವಾರ್ನರ್‌ರ ಉತ್ತಮ ಬ್ಯಾಟಿಂಗ್‌ನಿಂದ ಆಸ್ಟ್ರೇಲಿಯ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 297 ರನ್ ಗಳಿಸಿತು. ಫಿಂಚ್‌ರೊಂದಿಗೆ ಇನಿಂಗ್ಸ್ ಆರಂಭಿಸಿದ ವಾರ್ನರ್ 43 ರನ್ ಗಳಿಸಿ ಔಟಾದರು. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಸ್ಮಿತ್ ಶತಕ ಸಿಡಿಸಿದರು. 102 ಎಸೆತ ಎದುರಿಸಿದ ಸ್ಮಿತ್ 8 ಬೌಂಡರಿ ಹಾಗೂ 3 ಸಿಕ್ಸರ್‌ಗಳ ಸಹಾಯದಿಂದ 116 ರನ್ ಗಳಿಸಿದರು.

ಉಸ್ಮಾನ್ ಖ್ವಾಜಾ(31),ಶಾನ್ ಮಾರ್ಷ್(30) ಹಾಗೂ ಕಾರೆ(30) ಎರಡಂಕೆ ಸ್ಕೋರ್ ಗಳಿಸಿದರು. ವೇಗದ ಬೌಲರ್ ಪ್ಲಂಕೆಟ್(4-69)ನಾಲ್ಕು ವಿಕೆಟ್‌ಗಳನ್ನು ಕಬಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡರು.

►ಆಸ್ಟ್ರೇಲಿಯಕ್ಕೆ ರೋಚಕ ಜಯ

ವಿಶ್ವಕಪ್‌ನ ಅಭ್ಯಾಸ ಪಂದ್ಯದಲ್ಲಿ ಚಾಂಪಿಯನ್ ಆಸ್ಟ್ರೇಲಿಯ ತಂಡ ಇಂಗ್ಲೆಂಡ್ ವಿರುದ್ಧ ಶನಿವಾರ ನಡೆದ ಅಭ್ಯಾಸ ಪಂದ್ಯದಲ್ಲಿ 12 ರನ್‌ಗಳ ಅಂತರದಿಂದ ರೋಚಕ ಜಯ ದಾಖಲಿಸಿದೆ. ಗೆಲ್ಲಲು 298 ರನ್ ಗುರಿ ಪಡೆದಿದ್ದ ಇಂಗ್ಲೆಂಡ್ ತಂಡ 49.3 ಓವರ್‌ಗಳಲ್ಲಿ 285 ರನ್‌ಗೆ ಆಲೌಟಾಗಿ ಸೋಲೊಪ್ಪಿಕೊಂಡಿತು. ಬೆಹ್ರೆನ್‌ಡಾರ್ಫ್(2-43) ಹಾಗೂ ರಿಚರ್ಡ್‌ಸನ್(2-51) ತಲಾ ಎರಡು ವಿಕೆಟ್ ಪಡೆದರು. ಇಂಗ್ಲೆಂಡ್‌ನ ಪರ ವಿನ್ಸಿ(64) ಅಗ್ರ ಸ್ಕೋರರ್ ಎನಿಸಿಕೊಂಡರು. ನಾಯಕ ಜೋಸ್ ಬಟ್ಲರ್(52), ವೋಕ್ಸ್(40)ಗೆಲುವಿಗಾಗಿ ಕೊನೆಯ ತನಕ ಹೋರಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News