ವಸತಿ ಹಗರಣ: ಎನ್‌ಜಿಒ ಸಂಸ್ಥೆಯ ಅಧ್ಯಕ್ಷೆ ಬಂಧನ

Update: 2019-05-27 08:39 GMT

 ಹೈದರಾಬಾದ್, ಮೇ 26: ವಸತಿ ನಿರ್ಮಿಸಿ ಕೊಡುವುದಾಗಿ 2,700 ಜನರಿಂದ 8.1 ಕೋಟಿ ರೂ.ಗೂ ಹೆಚ್ಚಿನ ಹಣ ಸಂಗ್ರಹಿಸಿ ವಂಚನೆ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ಎನ್‌ಜಿಒ ಸಂಸ್ಥೆಯೊಂದರ ಅಧ್ಯಕ್ಷೆ ಹಾಗೂ ಆಕೆಯ ಮೂವರು ಸಹಾಯಕರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 ‘ಮಲ್ಯಾವಿ ಕರುಣೋದಯ ಸೊಸೈಟಿ ಫಾರ್ ಪೀಪಲ್ ಆಫ್ ಓಲ್ಡ್ ಏಜ್ ಆ್ಯಂಡ್ ಫಿಸಿಕಲೀ ಹ್ಯಾಂಡಿಕ್ಯಾಪ್ಡ್’ ಎಂಬ ಎನ್‌ಜಿಒ ಸಂಸ್ಥೆಯ ಅಧ್ಯಕ್ಷೆ ಕೆ.ಕೃಷ್ಣಮ್ಮ ಮತ್ತು ಆಕೆಯ ಮೂವರು ಸಹಚರರು ವಿದೇಶದ ಸಂಸ್ಥೆಯಿಂದ ಸಬ್ಸಿಡಿ ಪಡೆದು ಕಡಿಮೆ ದರದಲ್ಲಿ ಮನೆ ನಿರ್ಮಿಸಿ ಕೊಡುವುದಾಗಿ ಆಶ್ವಾಸನೆ ನೀಡಿದ್ದರು.

    ಬಡವರಿಗೆ 7.5 ಲಕ್ಷ ರೂ. ವೆಚ್ಚದಲ್ಲಿ ಡಬಲ್ ಬೆಡ್‌ರೂಂ ವಸತಿ ನಿರ್ಮಿಸಿಕೊಡುವುದಾಗಿ, ಇದರಲ್ಲಿ ವಿದೇಶದ ದೇಣಿಗೆಗಾರರಿಂದ ಪ್ರತೀ ಮನೆಗೆ 5 ಲಕ್ಷ ರೂ. ಸಬ್ಸಿಡಿ ದೊರೆಯುತ್ತದೆ ಎಂದು ಇವರು ಜನರನ್ನು ನಂಬಿಸಿದ್ದರು. ಆಸಕ್ತರು 2.5 ಲಕ್ಷ ರೂ. ನೀಡಿದರೆ ಮನೆ ಸಿಗುತ್ತದೆ ಎಂದು ಹೇಳಿ ಪ್ರತಿಯೊಬ್ಬರಿಂದ 30 ಸಾವಿರ ರೂ. ಮುಂಗಡ ಪಡೆದಿದ್ದರು. ಆದರೆ ಆರು ತಿಂಗಳಾದರೂ ಮನೆ ನಿರ್ಮಾಣ ಕಾರ್ಯ ಆರಂಭವಾಗಿಲ್ಲ ಎಂದು ಹೈದರಾಬಾದ್ ಬಳಿಯ ತಂಗುಟೂರ್ ಗ್ರಾಮದ ಕಾರ್ಮಿಕನೊಬ್ಬ ದೂರು ನೀಡಿದ್ದ. ಇದರಂತೆ ತನಿಖೆ ಆರಂಭಿಸಿದಾಗ ನಾಲ್ವರು ಆರೋಪಿಗಳು ಕಡಿಮೆ ವೆಚ್ಚದ ಮನೆಯ ಆಮಿಷ ನೀಡಿ ವಿವಿಧ ಜಿಲ್ಲೆಯ 2,700 ಜನರಿಂದ ಒಟ್ಟು 8.1 ಕೋಟಿ ರೂ. ಸಂಗ್ರಹಿಸಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು ತಲೆ ಮರೆಸಿಕೊಂಡಿರುವ ಉಳಿದ ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News