ಗಂಗಾನದಿಯ ಮಲಿನತೆ ಮಟ್ಟ ಸ್ವೀಕಾರಾರ್ಹ ಮಟ್ಟಕ್ಕಿಂತ 12 ಪಟ್ಟು ಅಧಿಕ: ವರದಿ

Update: 2019-05-27 08:43 GMT

ಹೊಸದಿಲ್ಲಿ, ಮೇ 26: ಗಂಗಾನದಿಯ ಮಲಿನತೆ ಮಟ್ಟವು ಸ್ವೀಕೃತಿ ಯೋಗ್ಯ ಮಟ್ಟಕ್ಕಿಂತ 3ರಿಂದ 12 ಪಟ್ಟು ಅಧಿಕವಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿಯಲ್ಲಿ ತಿಳಿಸಲಾಗಿದೆ.

     ಮಲಮೂತ್ರಗಳಲ್ಲಿ ಕಂಡುಬರುವ ಫೇಕಲ್ ಕಾಲಿಫಾರ್ಮ್ (ಎಫ್‌ಸಿ) ಬ್ಯಾಕ್ಟೀರಿಯಾಗಳು ನೀರನ್ನು ಕಲುಷಿತಗೊಳಿಸುತ್ತದೆ. ರಾಜ್ಯಗಳ ಗಡಿಭಾಗದಲ್ಲಿ ಹರಿಯುವ ಗಂಗಾನದಿಯಲ್ಲಿ ಮಾನವ ದೇಹದಿಂದ ಹೊರಬೀಳುವ ತ್ಯಾಜ್ಯಗಳು ನೇರವಾಗಿ (ಸಂಸ್ಕರಿಸಲ್ಪಡದೆ) ನದಿನೀರನ್ನು ಸೇರುವುದರಿಂದ ನೀರು ಮಲಿನವಾಗುತ್ತದೆ.ನೀರಿನಲ್ಲಿ ಎಫ್‌ಸಿ ಪ್ರಮಾಣ ಹೆಚ್ಚಿದರೆ ರೋಗಕಾರಕ ಅಂಶಗಳೂ ಹೆಚ್ಚುತ್ತದೆ. ಎಫ್‌ಸಿಯ ಅಪೇಕ್ಷಣೀಯ ಮಟ್ಟ 100 ಎಂಎಲ್ ನೀರಿನಲ್ಲಿ 500 ಎಂಪಿಎನ್ ಆಗಿದ್ದರೆ ಸ್ವೀಕೃತಿ ಯೋಗ್ಯ ಮಟ್ಟ 100 ಎಂಎಲ್ ನೀರಿನಲ್ಲಿ 2,500 ಎಂಪಿಎನ್ ಆಗಿದೆ.

ಆದರೆ ಪಶ್ಚಿಮ ಬಂಗಾಳದ ಬರ್ಹಾಂಪೋರ್‌ನ ಖಾಗ್ರಾದಲ್ಲಿ ಹರಿಯುವ ಗಂಗಾ ನದಿಯ ನೀರಿನಲ್ಲಿ ಎಫ್‌ಸಿ ಅಂಶ 100 ಎಂಎಲ್‌ಗೆ 30,000 ಎಂಪಿಎನ್ ಅಂದರೆ ಸ್ವೀಕಾರಾರ್ಹ ಮಟ್ಟಕ್ಕಿಂತ ಸುಮಾರು 12 ಪಟ್ಟು ಅಧಿಕ, ಅಪೇಕ್ಷಣೀಯ ಮಟ್ಟಕ್ಕಿಂತ ಸುಮಾರು 60 ಪಟ್ಟು ಅಧಿಕವಾಗಿದೆ.

 ನೀರಿನಲ್ಲಿ ಕಂಡು ಬರುವ ಪಿಎಚ್(ಹೈಡ್ರೋಜನ್, ಕಬ್ಬಿಣ ಕೇಂದ್ರೀಕರಣ) ಅಂಶ, ಬಿಒಡಿ(ಬಯೊಕೆಮಿಕಲ್ ಆಕ್ಸಿಜನ್ ಡಿಮಾಂಡ್), ಕರಗಿದ ಆಮ್ಲಜನಕ ಮತ್ತು ವಾಹಕತೆ ಅಪೇಕ್ಷಣೀಯ ಮಟ್ಟದಲ್ಲಿಯೇ ಇದೆ ಎಂದು ವರದಿ ತಿಳಿಸಿದೆ.

ಉತ್ತರಾಖಂಡ, ಉತ್ತರಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಜಾರ್ಖಂಡ್ ಸಹಿತ 9 ಅಂತರ್‌ರಾಜ್ಯ ಗಡಿಭಾಗದಲ್ಲಿ ಹರಿಯವು ಗಂಗಾ ನದಿಯ ನೀರಿನ ಗುಣಮಟ್ಟದ ಮಾಹಿತಿಯನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಬಿಡುಗಡೆಗೊಳಿಸಿದೆ. ಇದರಲ್ಲಿ ಉತ್ತರಾಖಂಡದ ಸುಲ್ತಾನ್‌ಪುರ ಹಾಗೂ ಉತ್ತರಪ್ರದೇಶದ ಬಿಜ್ನೋರ್‌ನಲ್ಲಿ ಮಾತ್ರ ನದಿನೀರಿನ ಎಫ್‌ಸಿ ಮಟ್ಟ ಸ್ವೀಕಾರಾರ್ಹ ಮಟ್ಟದಲ್ಲಿದೆ. ಗಂಗಾ ನದಿಯ ನೀರಿನಲ್ಲಿರುವ ಎಫ್‌ಸಿ ಮಟ್ಟದ ಅಂಕಿಅಂಶವನ್ನು ಬಿಡುಗಡೆಗೊಳಿಸಬೇಕು ಮತ್ತು ಇದನ್ನು ಸಂಬಂಧಿತ ರಾಜ್ಯಗಳ ವೆಬ್‌ಸೈಟ್‌ನಲ್ಲಿ ಪ್ರದರ್ಶಿಸಬೇಕು ಎಂದು ರಾಷ್ಟ್ರೀಯ ಹಸಿರು ಪ್ರಾಧಿಕಾರ ಆದೇಶ ನೀಡಿದ ಹಿನ್ನೆಲೆಯಲ್ಲಿ ಈ ಮಾಹಿತಿಯನ್ನು ಒದಗಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News