ಹಿರಿಯ ವೈದ್ಯೆಯರಿಂದ ಜಾತಿ ನಿಂದನೆ: ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆ

Update: 2019-05-27 08:47 GMT

ಹೊಸದಿಲ್ಲಿ, ಮೇ 27: ಜಾತಿಯ ಹೆಸರಿನಲ್ಲಿ ಹಿರಿಯ ವೈದ್ಯೆಯರಿಂದ ಸತತ ನಿಂದನೆಗೊಳಗಾಗಿ ತನ್ನ 23 ವರ್ಷದ ವೈದ್ಯೆ ಪುತ್ರಿ ತನ್ನ ಪ್ರಾಣ ಕಳೆದುಕೊಂಡಿದ್ದಾಳೆಂದು ಮುಂಬೈಯ ಬಿವೈಎಲ್ ಆಸ್ಪತ್ರೆಯ ಕೊಠಡಿಯಲ್ಲಿ ಮೇ 22ರಂದು ಶವವಾಗಿ ಪತ್ತೆಯಾದ 23 ವರ್ಷದ ವೈದ್ಯೆ ಪಾಯಲ್ ಸಲ್ಮಾನ್ ತಡ್ವಿ ಎಂಬಾಕೆಯ ತಾಯಿ ಆರೋಪಿಸಿದ್ದಾರೆ.

ಮೂವರು ಆರೋಪಿ ವೈದ್ಯೆಯರೂ ಸದ್ಯ ತಲೆಮರೆಸಿಕೊಂಡಿದ್ದು ಮಹಾರಾಷ್ಟ್ರ ಅಸೋಸಿಯೇಶನ್ ಆಫ್ ರೆಸಿಡೆಂಟ್ ಡಾಕ್ಟರ್ಸ್‌ ಅವರ ಸದಸ್ಯತನವನ್ನು ರದ್ದುಗೊಳಿಸಿದೆ. ಅವರನ್ನು ಹೇಮಾ ಅಹುಜ, ಭಕ್ತಿ ಮೆಹರ್ ಹಾಗೂ ಅಂಕಿತಾ ಖಂಡಿಲ್ವಾಲ್ ಎಂದು ಗುರುತಿಸಲಾಗಿದೆ.

ಆರೋಪಿಗಳು ನೀಡುತ್ತಿದ್ದ ಮಾನಸಿಕ ಹಿಂಸೆಯ ಕುರಿತಂತೆ ಈ ಹಿಂದೆಯೇ ಆಸ್ಪತ್ರೆಯ ಆಡಳಿತಕ್ಕೆ ದೂರು ಸಲ್ಲಿಸಿದ್ದರೂ ಆಶ್ವಾಸನೆಯ ಹೊರತಾಗಿ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ, ಲಿಖಿತ ಭರವಸೆಯನ್ನೂ ನೀಡಲಾಗಿಲ್ಲ ಎಂದು ಕ್ಯಾನ್ಸರ್ ನಿಂದ ಬಳಲುತ್ತಿರುವ ಪಾಯಲ್ ತಾಯಿ ಹೇಳಿದ್ದಾರೆ.

‘‘ಆಕೆ ನನ್ನಲ್ಲಿ ಫೋನಿನಲ್ಲಿ ಮಾತನಾಡಿದಾಗಲೆಲ್ಲಾ ಆಕೆ ಆದಿವಾಸಿ ಸಮುದಾಯಕ್ಕೆ ಸೇರಿದವಳೆಂಬ ಕಾರಣಕ್ಕಾಗಿ ಆಕೆಯನ್ನು ಆ ಮೂವರು ನಿಂದಿಸುತ್ತಿದ್ದರು’’ ಎಂದು ಹೇಳಿದ ಪಾಯಲ್ ತಾಯಿ, ತಮ್ಮ ಮಗಳಿಗೆ ನ್ಯಾಯ ದೊರೆಯಬೇಕು ಎಂದು ಆಗ್ರಹಿಸಿದ್ದಾರೆ.

ಆದರೆ ಆಸ್ಪತ್ರೆಯ ಡೀನ್ ರಮೇಶ್ ಭರ್ಮಾಲ್ ಆರೋಪಗಳನ್ನು ನಿರಾಕರಿಸಿದ್ದಾರೆ. ಇಲ್ಲಿಯ ತನಕ ಯಾವುದೇ ದೂರು ಕೂಡ ದಾಖಲಾಗಿಲ್ಲ ಎಂದು ಅವರು ಹೇಳಿದ್ದಾರೆ. ಆಸ್ಪತ್ರೆಯಲ್ಲಿ ರ್ಯಾಗಿಂಗ್ ನಿಗ್ರಹ ಸಮಿತಿ ರಚಿಸಿದ್ದು ಮೂವರು ಆರೋಪಿಗಳಿಗೂ ಸಮನ್ಸ್ ಕಳುಹಿಸಿದೆ. ಅವರೀಗ ಮುಂಬೈನಲ್ಲಿಲ್ಲ. ಆದಷ್ಟು ಬೇಗ ವರದಿ ಸಲ್ಲಿಸಲಾಗುವುದು ಎಂದಿದ್ದಾರೆ.

ಪಾಯಲ್ ಮತ್ತಾಕೆಯ ತಾಯಿ ಈ ಹಿಂದೆಯೇ ದೂರು ನೀಡಿದ್ದರೆಂದು ಹೆಸರು ಹೇಳಲಿಚ್ಛಿಸದ ಆಕೆಯ ಸಹೋದ್ಯೋಗಿಯೊಬ್ಬರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News