ದಾಭೋಲ್ಕರ್ ಹತ್ಯೆ ಪ್ರಕರಣ: ಸನಾತನ ಸಂಸ್ಥೆ ಸದಸ್ಯನಿಗೆ ಜೂನ್ 1ರವರೆಗೆ ಸಿಬಿಐ ಕಸ್ಟಡಿ

Update: 2019-05-27 08:48 GMT

ಪುಣೆ, ಮೇ 26: ವಿಚಾರವಾಧಿ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ವಕೀಲ ಸಂಜಯ್ ಪೂನಾಲೇಕರ್ ಮತ್ತು ಸನಾತನ ಸಂಸ್ಥೆ ಸದಸ್ಯ ವಿಕ್ರಮ್ ಭಾವೆಗೆ ಪುಣೆಯ ವಿಶೇಷ ನ್ಯಾಯಾಲಯ ಜೂನ್ 1ರವರೆಗೆ ಸಿಬಿಐ ಕಸ್ಟಡಿ ವಿಧಿಸಿದೆ.

ಬಂಧಿತ ಇಬ್ಬರು ವ್ಯಕ್ತಿಗಳಿಗೆ ದಾಭೋಲ್ಕರ್ ಹತ್ಯೆ ಪ್ರಕರಣದ ಇಬ್ಬರು ಆಕ್ರಮಣಕಾರರ ಜೊತೆ ಸಂಪರ್ಕವಿತ್ತು ಮತ್ತು ಇವರು ಕೊಲೆ ಪ್ರಕರಣದ ಸಾಕ್ಷಿಗಳನ್ನು ತಿರುಚಲು ಪ್ರಯತ್ನಿಸಿದ್ದರು ಎಂದು ಸಿಬಿಐ ಆರೋಪಿಸಿದೆ.

 ದಾಭೋಳ್ಕರ್ ಮತ್ತು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಲ್ಲಿ ಬಳಸಲಾದ ಆಯುಧವನ್ನು ನಾಶಗೊಳಿಸುವಂತೆ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಓರ್ವ ಶೂಟರ್ ಶರದ್ ಕಲಾಸ್ಕರ್‌ಗೆ ಸಂಜಯ್ ಪೂನಾಲೇಕರ್ ತಿಳಿಸಿದ್ದರು. ಅಲ್ಲದೆ ಶೂಟರ್‌ಗಳಿಗೆ ಭಾವೆ ನೆರವಾಗಿದ್ದ ಮತ್ತು ದಾಭೋಳ್ಕರ್‌ಗೆ ಗುಂಡು ಹಾರಿಸಿದ ಸ್ಥಳವನ್ನು ಖುದ್ದು ವೀಕ್ಷಿಸಿದ್ದ ಎಂದು ಸಿಬಿಐ ತಿಳಿಸಿದೆ.

 ಪ್ರಕರಣದಲ್ಲಿ ಸಂಜಯ್ ಮತ್ತು ವಿಕ್ರಮ್ ಭಾವೆ ವಹಿಸಿರುವ ಪಾತ್ರದ ಬಗ್ಗೆ ತನಿಖೆ ನಡೆಸಲು ಇನ್ನಷ್ಟು ಸಮಯ ಬೇಕಾಗುತ್ತದೆ ಎಂದು ಸಿಬಿಐ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡರು. 2013ರ ಆಗಸ್ಟ್ 20ರಂದು ಮುಂಜಾನೆಯ ವಾಯುವಿಹಾರಕ್ಕೆ ತೆರಳಿದ್ದ ದಾಭೋಲ್ಕರ್‌ರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಇದುವರೆಗೆ ಪ್ರಕರಣಕ್ಕೆ ಸಂಬಂಧಿಸಿ ಆರು ಆರೋಪಿಗಳನ್ನು ಸಿಬಿಐ ಬಂಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News