×
Ad

ದೊಡ್ಡ ಸುಸ್ತಿದಾರರ ಹೆಸರುಗಳ ಬಹಿರಂಗಕ್ಕೆ ಆರ್‌ಬಿಐಗೆ ಸಿಐಸಿ ನಿರ್ದೇಶ

Update: 2019-05-27 23:42 IST

ಹೊಸದಿಲ್ಲಿ,ಮೇ 27: ಬ್ಯಾಂಕುಗಳಿಗೆ ಇತ್ಯರ್ಥಗೊಳಿಸಲು ಆರ್‌ಬಿಐ ಕಳುಹಿಸಿರುವ ದೊಡ್ಡ ಸಾಲ ಬಾಕಿದಾರರ ಪಟ್ಟಿಯನ್ನು ಬಹಿರಂಗಗೊಳಿಸುವಂತೆ ಕೇಂದ್ರ ಮಾಹಿತಿ ಆಯೋಗ (ಸಿಐಸಿ)ವು ಅದಕ್ಕೆ ನಿರ್ದೇಶ ನೀಡಿದೆ.

ಲಕ್ನೋದ ಆರ್‌ಟಿಐ ಕಾರ್ಯಕರ್ತೆ ನೂತನ ಠಾಕೂರ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸಿಐಸಿ ಈ ನಿರ್ದೇಶವನ್ನು ಹೊರಡಿಸಿದೆ. ಆರ್‌ಬಿಐ ಡೆಪ್ಯೂಟಿ ಗವರ್ನರ್ ವಿರಲ್ ಆಚಾರ್ಯ ಅವರು 2017ರಲ್ಲಿ ಉಪನ್ಯಾಸವೊಂದರಲ್ಲಿ ಕೆಲವು ಸುಸ್ತಿದಾರರ ಲೆಕ್ಕಗಳನ್ನು ಇತ್ಯರ್ಥಕ್ಕಾಗಿ ಬ್ಯಾಂಕುಗಳಿಗೆ ಕಳುಹಿಸಲಾಗಿದೆ ಎಂದು ನೀಡಿದ್ದ ಹೇಳಿಕೆಯ ಕುರಿತು ಕೆಲವು ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ ಈ ಸುಸ್ತಿದಾರರ ಹೆಸರುಗಳನ್ನು ತಿಳಿಸುವಂತೆ ಕೋರಿ ಠಾಕೂರ್ ಅವರು ಆರ್‌ಟಿಐ ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು.

ಆಂತರಿಕ ಸಲಹಾ ಸಮಿತಿಯ ಶಿಫಾರಸಿನ ಮೇರೆಗೆ ಒಟ್ಟು ಅನುತ್ಪಾದಕ ಆಸ್ತಿಗಳ ಶೇ.25ರಷ್ಟು ಸಾಲಗಳನ್ನು ಬಾಕಿಯಿರಿಸಿಕೊಂಡಿರುವ 12 ದೊಡ್ಡ ಸುಸ್ತಿದಾರ ವಿರುದ್ಧ ದಿವಾಳಿ ಕಾಯ್ದೆಯಡಿ ಕ್ರಮಗಳನ್ನು ಕೈಗೊಳ್ಳುವಂತೆ ಆರ್‌ಬಿಐ ಬ್ಯಾಂಕುಗಳಿಗೆ ನಿರ್ದೇಶ ನೀಡಿದೆ ಎಂದೂ ಆಚಾರ್ಯ ತಿಳಿಸಿದ್ದರು.

ಈ ಸುಸ್ತಿದಾರರ ಪಟ್ಟಿಯನ್ನು ಹಾಗೂ ಟಿಪ್ಪಣಿಗಳು ಮತ್ತು ಪತ್ರವ್ಯವಹಾರಗಳ ದಾಖಲೆಗಳನ್ನು ಒದಗಿಸುವಂತೆ ಠಾಕೂರ್ ಆರ್‌ಬಿಐಗೆ ಸಲ್ಲಿಸಿದ್ದ ತನ್ನ ಅರ್ಜಿಯಲ್ಲಿ ಕೋರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News