ಮೊದಲ ಸುತ್ತಿನಲ್ಲೇ ಮುಗ್ಗರಿಸಿದ ವೋಝ್ನಿಯಾಕಿ
ಪ್ಯಾರಿಸ್, ಮೇ 27: ವಿಶ್ವದ ಮಾಜಿ ನಂ.1 ಆಟಗಾರ್ತಿ ಕರೊಲಿನ್ ವೋಝ್ನಿಯಾಕಿ ಫ್ರೆಂಚ್ ಓಪನ್‌ನ ಮೊದಲ ಸುತ್ತಿನಲ್ಲೇ ಮುಗ್ಗರಿಸಿದ್ದಾರೆ.
ಸೋಮವಾರ ನಡೆದ ಮಹಿಳೆಯರ ಸಿಂಗಲ್ಸ್ ನ ಮೊದಲ ಸುತ್ತಿನ ಪಂದ್ಯದಲ್ಲಿ ಡೆನ್ಮಾರ್ಕ್ ಆಟಗಾರ್ತಿ ವೋಝ್ನಿಯಾಕಿ ರಶ್ಯದ ವಿಶ್ವದ ನಂ.68ನೇ ಆಟಗಾರ್ತಿ ವೆರೊನಿಕಾ ಕುಡೆರ್ಮೆಟೊವಾ ವಿರುದ್ಧ 6-0, 3-6, 3-6 ಸೆಟ್‌ಗಳಿಂದ ಸೋತಿದ್ದಾರೆ.
ಫ್ರೆಂಚ್ ಓಪನ್‌ಗಿಂತ ಮೊದಲು ನಡೆದ ಕಳೆದೆರಡು ಪಂದ್ಯಗಳಲ್ಲಿ ಗಾಯದ ಸಮಸ್ಯೆ ಎದುರಿಸಿದ್ದ 13ನೇ ಶ್ರೇಯಾಂಕದ ವೋಝ್ನಿಯಾಕಿ ಏಕಪಕ್ಷೀಯವಾಗಿ ಸಾಗಿದ ಮೊದಲ ಸೆಟ್‌ನ್ನು 6-0 ಅಂತರದಿಂದ ಗೆದ್ದುಕೊಂಡರು.
ಕಳೆದ ವರ್ಷ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಜಯಿಸಿದ್ದ ವೋಝ್ನಿಯಾಕಿ 10 ಅನಗತ್ಯ ತಪ್ಪೆಸಗಿ ಎರಡನೇ ಸೆಟ್‌ನಲ್ಲಿ ಸೋತಿದ್ದಾರೆ. 22ರ ಹರೆಯದ ವೆರೊನಿಕಾ ಮೂರನೇ ಸೆಟ್‌ನಲ್ಲಿ ಪ್ರಾಬಲ್ಯ ಸಾಧಿಸಿ ಎರಡನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. ‘‘ಪಂದ್ಯದ ಆರಂಭದಲ್ಲಿ ನಾನು ಸ್ವಲ್ಪ ಹೆದರಿಕೊಂಡಿದ್ದೆ. ಆದರೆ, ಪಂದ್ಯ ಮುಂದುವರಿದಂತೆ ಹೆಚ್ಚು ಆಕ್ರಮಣಕಾರಿ ಆಟಕ್ಕೆ ಪ್ರಯತ್ನಿಸಿದೆ’’ ಎಂದು ರಶ್ಯ ಆಟಗಾರ್ತಿ ಹೇಳಿದ್ದಾರೆ. ವೆರೊನಿಕಾ ಮುಂದಿನ ಸುತ್ತಿನಲ್ಲಿ ಕಝಕ್‌ಸ್ತಾನದ ಝರಿನಾ ಡಿಯಾಸ್ ಅಥವಾ ಫ್ರಾನ್ಸ್‌ನ ವೈಲ್ಡ್ ಕಾರ್ಡ್ ಆಟಗಾರ್ತಿ ಆಡ್ರಿ ಅಲ್ಬಿ ಅವರನ್ನು ಎದುರಿಸಲಿದ್ದಾರೆ.