ಫ್ರೆಂಚ್ ಓಪನ್‌ನಿಂದ ಹಿಂದೆ ಸರಿದ ಕ್ವಿಟೋವಾ
ಪ್ಯಾರಿಸ್,ಮೇ 27: ರೊಮಾನಿಯದ ಸೊರಾನಾ ಸಿಸ್ಟಿಯಾ ವಿರುದ್ಧ ಮೊದಲ ಪಂದ್ಯವನ್ನು ಆಡಲು ಕೆಲವೇ ಗಂಟೆಗಳು ಬಾಕಿ ಇರುವಾಗ ಕೈಗೆ ಗಾಯವಾದ ಕಾರಣ ಪೆಟ್ರಾ ಕ್ವಿಟೋವಾ ಸೋಮವಾರ ಫ್ರೆಂಚ್ ಓಪನ್‌ನಿಂದ ಹಿಂದೆ ಸರಿದಿದ್ದಾರೆ. ‘‘ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಿಂದ ಹಿಂದೆ ಸರಿಯುತ್ತಿರುವುದಾಗಿ ಘೋಷಿಸಲು ನನಗೆ ತುಂಬಾ ಬೇಸರವಾಗುತ್ತಿದೆ. ಕೆಲವು ವಾರಗಳ ಹಿಂದೆ ನನ್ನ ಎಡಗೈಯಲ್ಲಿ ನೋವು ಕಾಣಿಸಿಕೊಂಡಿತ್ತು. ಕಳೆದ ರಾತ್ರಿ ಎಂಆರ್‌ಐ ಸ್ಕಾನಿಂಗ್‌ನಲ್ಲಿ ಗಾಯದ ಗಂಭೀರತೆ ಬೆಳಕಿಗೆ ಬಂದಿದೆ. ಇಂದು ಪಂದ್ಯ ಆಡಿದರೆ ಗಾಯ ಉಲ್ಬಣಿಸುವ ಭೀತಿ ಎದುರಾಗಿತ್ತು. ಹೀಗಾಗಿ ಟೂರ್ನಿಯಿಂದ ಹಿಂದೆ ಸರಿದಿದ್ದೇನೆ’’ ಎಂದು ಆರನೇ ಶ್ರೇಯಾಂಕದ ಆಟಗಾರ್ತಿ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.
ಝೆಕ್ ಆಟಗಾರ್ತಿ ಕ್ವಿಟೋವಾ ಬದಲಿಗೆ ಸ್ಲೋವಾನಿಯದ ಕಾಜಾ ಜುವಾನ್ ಅವರು ಸಿಸ್ಟಿಯಾ ವಿರುದ್ಧ ಮೊದಲ ಸುತ್ತಿನ ಪಂದ್ಯ ಆಡಲಿದ್ದಾರೆ.
2012ರಲ್ಲಿ ಫ್ರೆಂಚ್ ಓಪನ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದ ಕ್ವಿಟೋವಾ ಸ್ಟಟ್‌ಗರ್ಟ್‌ನಲ್ಲಿ ಪ್ರಶಸ್ತಿ ಜಯಿಸುವುದರೊಂದಿಗೆ ಕ್ಲೇ ಕೋರ್ಟ್‌ನಲ್ಲಿ ಉತ್ತಮ ಆರಂಭ ಪಡೆದಿದ್ದರು. ಮ್ಯಾಡ್ರಿಡ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದರು. ಮ್ಯಾಡ್ರಿಡ್ ಮಾಸ್ಟರ್ಸ್ ಟೂರ್ನಿಯಲ್ಲಿ ಮತ್ತೆ ಗಾಯಗೊಂಡಿದ್ದ ಕ್ವಿಟೋವಾಗೆ ಪ್ಯಾರಿಸ್ ಓಪನ್ ಟೂರ್ನಿಯ ತಯಾರಿಗೆ ಇದರಿಂದ ತೊಂದರೆಯಾಗಿತ್ತು. ಅವರು 2017ರಲ್ಲಿ ಪ್ಯಾರಿಸ್‌ನಲ್ಲಿ ಸಕ್ರಿಯ ಟೆನಿಸ್‌ಗೆ ವಾಪಸಾಗಿದ್ದರು.
‘‘ಎರಡು ವರ್ಷಗಳ ಹಿಂದೆ ರೊಲ್ಯಾಂಡ್ ಗ್ಯಾರೊಸ್‌ನಲ್ಲಿ ತಾನು ಸಕ್ರಿಯ ಟೆನಿಸ್‌ಗೆ ವಾಪಸಾಗಿದ್ದೆ. ಈ ವರ್ಷ ಪ್ಯಾರಿಸ್‌ನಲ್ಲಿ ಆಡಲು ಸಾಧ್ಯವಾಗದೇ ಇರುವುದಕ್ಕೆ ತುಂಬಾ ಬೇಸರವಾಗುತ್ತಿದೆ. ಇದೊಂದು ನಿಜವಾಗಿಯೂ ಕಠಿಣ ನಿರ್ಧಾರವಾಗಿದೆ’’ ಎಂದು ಈ ಹಿಂದೆ ದುಷ್ಕರ್ಮಿಯೊಬ್ಬನಿಂದ ಚೂರಿ ಇರಿತಕ್ಕೆ ಒಳಗಾಗಿದ್ದ ಕ್ವಿಟೋವಾ ಹೇಳಿದ್ದಾರೆ.