ಕ್ಷೇತ್ರದ ಕಡೆಗೆ ಗಮನ ಹರಿಸುವಂತೆ ಕಾರ್ತಿ ಚಿದಂಬರಂಗೆ ಸುಪ್ರೀಂ ಸೂಚನೆ

Update: 2019-05-29 08:59 GMT

ಹೊಸದಿಲ್ಲಿ,  ಮೇ 22: ಕಾಂಗ್ರೆಸ್ ನ ಸಂಸದ ಕಾರ್ತಿ ಚಿದಂಬರಂ ಅವರು ವಿದೇಶಕ್ಕೆ ಪ್ರಯಾಣಿಸುವ ಉದ್ದೇಶಕ್ಕಾಗಿ ನ್ಯಾಯಾಲಯದಲ್ಲಿ ಇರಿಸಿದ್ದ ಠೇವಣಿಯನ್ನು ಹಿಂದಕ್ಕೆ ನೀಡಲು ಸಲ್ಲಿಸಿದ್ದ ಮನವಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದ್ದು, ಕ್ಷೇತ್ರದ ಕಡೆಗೆ ಗಮನಹರಿಸುವಂತೆ ಸಲಹೆ ನೀಡಿದೆ.

ಕಾರ್ತಿ ಚಿದಂಬರಂ ವಿದೇಶಕ್ಕೆ ಪ್ರಯಾಣಿಸುವ ಉದ್ದೇಶಕ್ಕಾಗಿ   ನ್ಯಾಯಾಲಯದ ರಿಜಿಸ್ಟ್ರಿಯಲ್ಲಿ 10 ಕೋಟಿ ರೂ. ಠೇವಣಿ ಇರಿಸಿದ್ದರು.  ತಾನು ಸಾಲ ಪಡೆದು ನ್ಯಾಯಾಲಯದಲ್ಲಿ ಠೇವಣಿ ಇಟ್ಟಿರುವ ಈ ಹಣಕ್ಕೆ ಬಡ್ಡಿ ಪಾವತಿಸುತ್ತಿರುವುದಾಗಿ ಹೇಳಿರುವ ಕಾರ್ತಿ ಈ ಹಣವನ್ನು ಹಿಂದಕ್ಕೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

ಕಾರ್ತಿ ಅರ್ಜಿಯ ವಿಚಾರಣೆಗೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯ್ ಮತ್ತು ಅನಿರುದ್ಧ ಬೋಸ್ ಅವರನ್ನು ಒಳಗೊಂಡ ನ್ಯಾಯಪೀಠ ಕಾರ್ತಿ ಚಿದಂಬರಂಗೆ ವಿದೇಶಕ್ಕೆ ಪ್ರಯಾಣಿಸಲು ಠೇವಣಿಯನ್ನು ಹಿಂದಕ್ಕೆ ನೀಡಲು ನಿರಾಕರಿಸಿದೆ. ತನ್ನ ಲೋಕಸಭಾ ಕ್ಷೇತ್ರದ ಕಡೆಗೆ ಗಮನಹರಿಸುವಂತೆ ಕಾರ್ತಿ ಚಿದಂಬರಂಗೆ ನ್ಯಾಯಾಲಯ  ಸೂಚನೆ ನೀಡಿದೆ.

ಕೇಂದ್ರ ಸಚಿವ ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ತಮಿಳುನಾಡಿನ ಶಿವಗಂಗಾ ಕ್ಷೇತ್ರದಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಚ್.ರಾಜಾ ಅವರನ್ನು 3ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಮಣಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News