ಭಾರತದಲ್ಲಿ ಜನಸಂಖ್ಯೆ ನಿಯಂತ್ರಣಕ್ಕಾಗಿ ಅರ್ಜಿಗೆ ಉತ್ತರಿಸಲು ಕೇಂದ್ರಕ್ಕೆ ದಿಲ್ಲಿ ಹೈಕೋರ್ಟ್ ಆದೇಶ

Update: 2019-05-29 16:45 GMT

ಹೊಸದಿಲ್ಲಿ,ಮೇ 29: ದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸಲು ಕ್ರಮಗಳನ್ನು ಜಾರಿಗೊಳಿಸುವಂತೆ ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಉತ್ತರಿಸುವಂತೆ ದಿಲ್ಲಿ ಉಚ್ಚ ನ್ಯಾಯಾಲಯವು ಬುಧವಾರ ಕೇಂದ್ರಕ್ಕೆ ಸೂಚಿಸಿದೆ.

ವಕೀಲರೂ ಆಗಿರುವ ಬಿಜೆಪಿ ನಾಯಕ ಅಶ್ವಿನಿ ಕುಮಾರ ಉಪಾಧ್ಯಾಯ ಅವರು ಸಲ್ಲಿಸಿರುವ ಅರ್ಜಿಯು ಹೆಚ್ಚುತ್ತಿರುವ ಜನಸಂಖ್ಯೆಯು ಅಪರಾಧಗಳಲ್ಲಿ ಏರಿಕೆ,ಮಾಲಿನ್ಯ ಹಾಗೂ ಸಂಪನ್ಮೂಲಗಳು ಮತ್ತು ಉದ್ಯೋಗಗಳ ಕೊರತೆಗೆ ಮೂಲಕಾರಣವಾಗಿದೆ ಎಂದು ಪ್ರತಿಪಾದಿಸಿದೆ.

ಗೃಹ ವ್ಯವಹಾರಗಳ ಸಚಿವಾಲಯ ಮತ್ತು ಭಾರತೀಯ ಕಾನೂನು ಆಯೋಗಕ್ಕೆ ನೋಟಿಸ್‌ಗಳನ್ನು ಹೊರಡಿಸಿದ ಮುಖ್ಯ ನ್ಯಾಯಾಧೀಶ ರಾಜೇಂದ್ರ ಮೆನನ್ ಮತ್ತು ನ್ಯಾ.ಬೃಜೇಶ ಸೇಠಿ ಅವರ ಪೀಠವು,ಅರ್ಜಿಯ ವಿಚಾರಣೆಯನ್ನು ಸೆ.3ಕ್ಕೆ ನಿಗದಿಗೊಳಿಸಿತು.

ನ್ಯಾ.ವೆಂಕಟಾಚಲಯ್ಯ ನೇತೃತ್ವದ ರಾಷ್ಟ್ರಿಯ ಸಂವಿಧಾನ ಕಾರ್ಯ ನಿರ್ವಹಣೆ ಪುನರ್‌ಪರಿಶೀಲನಾ ಆಯೋಗ(ಎನ್‌ಸಿಆರ್‌ಡಬ್ಲು ಸಿ)ವು ಜನಸಂಖ್ಯೆ ನಿಯಂತ್ರಣಕ್ಕಾಗಿ ಮಾಡಿರುವ ಶಿಫಾರಸುಗಳನ್ನು ಅನುಷ್ಠಾನಿಸುವಂತೆ ತನ್ನ ಅರ್ಜಿಯಲ್ಲಿ ಕೋರಿರುವ ಉಪಾಧ್ಯಾಯ ಅವರು,ಎರಡು ವರ್ಷಗಳ ತೀವ್ರ ಪ್ರಯತ್ನಗಳು ಮತ್ತು ಚರ್ಚೆಗಳ ನಂತರ ಆಯೋಗವು ಸಂವಿಧಾನದಲ್ಲಿ ವಿಧಿ 47ಎ ಸೇರ್ಪಡೆ ಮತ್ತು ಜನಸಂಖ್ಯಾ ನಿಯಂತ್ರಣ ಕಾನೂನು ರಚನೆಗೆ ಸೂಚಿಸಿತ್ತು. ಈ ವರೆಗೆ 125 ಬಾರಿ ಸಂವಿಧಾನಕ್ಕೆ ತಿದ್ದುಪಡಿಗಳನ್ನು ಮಾಡಲಾಗಿದೆ ಮತ್ತು ನೂರಾರು ಹೊಸ ಕಾನೂನುಗಳನ್ನು ತರಲಾಗಿದೆ. ಆದರೆ ಭಾರತದ ಸಮಸ್ಯೆಗಳನ್ನು ಶೇ.50ಕ್ಕೂ ಅಧಿಕ ಕಡಿತಗೊಳಿಸುವ,ದೇಶಕ್ಕೆ ಅತ್ಯಗತ್ಯವಾಗಿರುವ ಜನಸಂಖ್ಯಾ ನಿಯಂತ್ರಣ ಕಾನೂನನ್ನು ತರಲಾಗಿಲ್ಲ ಎಂದು ಹೇಳಿದ್ದಾರೆ.

ಸರಕಾರಿ ಉದ್ಯೋಗಗಳು,ನೆರವುಗಳು ಮತ್ತು ಸಬ್ಸಿಡಿಗಳಿಗೆ ಮಾನದಂಡವಾಗಿ ಎರಡು ಮಕ್ಕಳ ನಿಯಮವನ್ನು ಸರಕಾರವು ತರಬಹುದು ಮತ್ತು ಈ ನಿಯಮವನ್ನು ಪಾಲಿಸದಿದ್ದರೆ ಮತದಾನದ ಹಕ್ಕು,ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕು,ಆಸ್ತಿ ಹಕ್ಕು ಮುಂತಾದ ಶಾಸನಬದ್ಧ ಹಕ್ಕುಗಳನ್ನು ಹಿಂದೆಗೆದುಕೊಳ್ಳಬಹುದು ಎಂದು ಘೋಷಿಸಿ ಆದೇಶವನ್ನು ಹೊರಡಿಸುವಂತೆಯೂ ಅವರು ನ್ಯಾಯಾಲಯವನ್ನು ಕೋರಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News