ಹಡಗುಗಳ ಮೇಲಿನ ದಾಳಿಯಲ್ಲಿ ಇರಾನ್ ಇರುವುದು ‘ಬಹುತೇಕ ಖಚಿತ’

Update: 2019-05-29 18:26 GMT

ಅಬುಧಾಬಿ (ಯುಎಇ), ಮೇ 29: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನ ಕರಾವಳಿಯಲ್ಲಿ ಈ ತಿಂಗಳು ಹಲವು ವಾಣಿಜ್ಯ ಹಡಗುಗಳ ಮೇಲೆ ನಡೆದ ದಾಳಿಯ ಹಿಂದೆ ಇರಾನ್ ಇರುವುದು ‘ಬಹುತೇಕ ಖಚಿತ’ವಾಗಿದೆ ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಬುಧವಾರ ಹೇಳಿದ್ದಾರೆ.

ಸೌದಿ ಅರೇಬಿಯದ ಎರಡು ತೈಲ ಟ್ಯಾಂಕರ್‌ಗಳು ಸೇರಿದಂತೆ ನಾಲ್ಕು ಹಡಗುಗಳ ಮೇಲಿನ ದಾಳಿಯಲ್ಲಿ ಬಳಸಲಾದ ನೇವಲ್ ಮೈನ್ (ನೀರಿನಲ್ಲಿ ಇರಿಸಲಾಗುವ ಸ್ಫೋಟಕಗಳು)ಗಳು ಇರಾನ್‌ನಿಂದ ಬಂದಿರುವುದು ಬಹುತೇಕ ಖಚಿತವಾಗಿದೆ ಎಂದು ಯುಎಇ ರಾಜಧಾನಿ ಅಬುಧಾಬಿಯಲ್ಲಿ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ ಬೋಲ್ಟನ್ ನುಡಿದರು.

ಯುಎಇಯ ಫುಜೈರಾ ಕರಾವಳಿಯ ಒಮಾನ್ ಸಮುದ್ರದಲ್ಲಿ ಮೇ 12ರಂದು ನಡೆದ ದಾಳಿಗಳಲ್ಲಿ ನಾಲ್ಕು ಹಡಗುಗಳಿಗೆ ಹಾನಿಯಾಗಿರುವುದನ್ನು ಸ್ಮರಿಸಬಹುದಾಗಿದೆ. ಈ ಬಗ್ಗೆ ಅಮೆರಿಕ ಸೇರಿದಂತೆ ಐದು ದೇಶಗಳ ಪರಿಣತರ ತಂಡವೊಂದು ತನಿಖೆ ನಡೆಸುತ್ತಿದೆ.

‘‘ಈ ಘಟನೆಗೆ ಯಾರು ಕಾರಣ ಎಂಬ ಬಗ್ಗೆ ಯಾವುದೇ ಅಮೆರಿಕನ್ನರ ಮನಸ್ಸಿನಲ್ಲಿ ಗೊಂದಲವಿಲ್ಲ. ಇದನ್ನು ಯಾರು ಮಾಡುತ್ತಾರೆ ಎಂದು ನೀವು ಭಾವಿಸಿರುವಿರಿ? ನೇಪಾಳದ ಯಾರಾದರೂ ಮಾಡಿದ್ದಾರೆಂದೇ?’’ ಎಂದು ಅವರು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News