ಮೋದಿ ಸಂಪುಟಕ್ಕೆ ಮಾಜಿ ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್ ಸೇರ್ಪಡೆ

Update: 2019-05-30 17:49 GMT

ಹೊಸದಿಲ್ಲಿ, ಮೇ 30: ಮಾಜಿ ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್ ಪ್ರಧಾನಿ ನರೇಂದ್ರ ಮೋದಿಯ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿದ್ದ ಜೈಶಂಕರ್‌ಗೆ ಕಳೆದ ಮಾರ್ಚ್‌ನಲ್ಲಿ ರಾಷ್ಟ್ರಪತಿ ಪ್ರಶಸ್ತಿ ಪ್ರದಾನ ಮಾಡಿದ್ದರು.

ವಿದೇಶಾಂಗ ಕಾರ್ಯದರ್ಶಿಯಾಗಿ ಅತ್ಯಂತ ಸುದೀರ್ಘಾವಧಿಯವರೆಗೆ ಕಾರ್ಯ ನಿರ್ವಹಿಸಿದ ಹಿರಿಮೆ ಇವರದ್ದಾಗಿದೆ. 2015ರ ಜನವರಿಯಲ್ಲಿ ಮೋದಿ ಸರಕಾರವು ಸುಜಾತಾ ಸಿಂಗ್ ಸ್ಥಾನದಲ್ಲಿ ಜೈಶಂಕರ್‌ರನ್ನು ವಿದೇಶಾಂಗ ಕಾರ್ಯದರ್ಶಿಯನ್ನಾಗಿ ನೇಮಿಸಿತ್ತು. ಚೀನಾಕ್ಕೆ ಭಾರತದ ಮಾಜಿ ರಾಯಭಾರಿಯಾಗಿರುವ ಜೈಶಂಕರ್ ಚೀನಾ-ಭಾರತ ಮಧ್ಯೆ ಉಂಟಾದ ಡೋಕಾ ಲಾ ಬಿಕ್ಕಟ್ಟನ್ನು ಪರಿಹರಿಸುವಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದ್ದರು. ಅಮೆರಿಕದೊಂದಿಗೆ ಪರಮಾಣು ಒಪ್ಪಂದ ರೂಪಿಸುವ ತಂಡದಲ್ಲಿಯೂ ಪ್ರಧಾನ ಪಾತ್ರ ವಹಿಸಿದ್ದರು. 2005ರಲ್ಲಿ ಆರಂಭಗೊಂಡ ಮಾತುಕತೆ ಪ್ರಕ್ರಿಯೆಗೆ ಅಂತಿಮವಾಗಿ 2007ರಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರದ ಅವಧಿಯಲ್ಲಿ ಸಹಿ ಹಾಕಲಾಗಿತ್ತು.

1997ರ ಬ್ಯಾಚ್‌ನ ಐಎಫ್‌ಎಸ್ ಅಧಿಕಾರಿಯಾಗಿದ್ದ ಜೈಶಂಕರ್‌ರನ್ನು 2013ರಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ರಂಜನ್ ಮಥಾಯ್ ಬದಲಿಗೆ ವಿದೇಶಾಂಗ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲು ಒಲವು ತೋರಿದ್ದರು ಎನ್ನಲಾಗಿದೆ. ಆದರೆ ಕಾಂಗ್ರೆಸ್‌ನ ಹಿರಿಯ ಮುಖಂಡರು ಸೇವಾ ಹಿರಿತನಕ್ಕೆ ಆದ್ಯತೆ ನೀಡುವಂತೆ ಸಲಹೆ ನೀಡಿದ್ದ ಹಿನ್ನೆಲೆಯಲ್ಲಿ ಸುಜಾತಾ ಸಿಂಗ್‌ರನ್ನು ವಿದೇಶಾಂಗ ಕಾರ್ಯದರ್ಶಿಯನ್ನಾಗಿ ನೇಮಿಸಿದ್ದರು. ತಮ್ಮ ಸೇವಾವಧಿಯಲ್ಲಿ ಮಾಸ್ಕೋ ಹಾಗೂ ಇತರ ಹಲವು ಯುರೋಪ್ ದೇಶಗಳ ರಾಜಧಾನಿಯಲ್ಲಿ ಕಾರ್ಯನಿರ್ವಹಿಸಿದ್ದ ಜೈಶಂಕರ್, ಶ್ರೀಲಂಕಾದಲ್ಲಿ ಭಾರತದ ಶಾಂತಿಪಾಲನಾ ತಂಡದ ಸಲಹೆಗಾರನಾಗಿಯೂ ಕರ್ತವ್ಯ ನಿಭಾಯಿಸಿದ್ದರು. 2018ರಲ್ಲಿ ಸೇವಾ ನಿವೃತ್ತಿ ಹೊಂದಿದ ಬಳಿಕ ಟಾಟಾ ಸಮೂಹ ಸಂಸ್ಥೆಯ ಜಾಗತಿಕ ಕಾರ್ಪೊರೇಟ್ ವ್ಯವಹಾರಗಳ ಅಧ್ಯಕ್ಷರಾಗಿ ನೇಮಕಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News